ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ ಅವರು ಪಕ್ಷವನ್ನು ಪುನಶ್ಚೇತನಗೊಳಿಸುವಂತೆ ಪಕ್ಷದ ವರಿಷ್ಠೆ ಸೋನಿಯಾ ಮೊರೆ ಹೋಗಿದ್ದಾರೆ.
ಬಿಜೆಪಿಯ ಹಿಡಿತದಿಂದ ಕರ್ನಾಟಕವನ್ನು ಹೊರತನ್ನಿ ಎಂದು ರಾಜಶೇಖರನ್ನು ಮೇಡಂ ಅವರಲ್ಲಿ ಅಲವತ್ತುಕೊಂಡಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸಮರ್ಪಕ ಬದಲಾವಣೆಯೊಂದಿಗೆ, ಕೋಮುವಾದಿ ಪಕ್ಷವನ್ನು ಬಗ್ಗುಬಡಿಯದಿದ್ದಲ್ಲಿ, ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂದು ಮನವಿ ಮಾಡಿದ್ದಾರೆ.
ಶುಕ್ರವಾರ ಕಾಂಗ್ರೆಸ್ ವರಿಷ್ಠೆ ಸೋನಿಯ ಗಾಂಧಿ ಅವರನ್ನು ಎಂ.ವಿ.ಭೇಟಿ ಮಾಡಿ ಸುಮಾರು 20ನಿಮಿಷಗಳ ಕಾಲ ಮಾತುಕತೆ ನಡೆಸಿದರು. ರಾಜ್ಯರಾಜಕಾರಣದಲ್ಲಿ ವೀರಶೈವ ಸಮುದಾಯವನ್ನೇ ಬಿಜೆಪಿಯತ್ತ ದೂಡುವುದು ಉತ್ತಮವಾದ ಬೆಳವಣಿಗೆ ಅಲ್ಲ ಎಂದು ಕಿವಿಮಾತು ಹೇಳಿದ್ದರು.
ವೀರಶೈವ ಯುವಕರ ತಲೆಗೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿಚಾರಗಳನ್ನು ತುಂಬುತ್ತಿರುವ ಆತಂಕಕಾರಿ ಬೆಳವಣಿಗೆಗೆ ಕಡಿವಾಣ ಹಾಕಲೇಬೇಕಿದೆ. ಜಾತ್ಯತೀತ ಮನೋಭಾವದ ವೀರಶೈವ ನಾಯಕರಿಗೆ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿ ಜನಾಂಗದ ವಿಶ್ವಾಸವನ್ನು ಗಳಿಸುವ ಅಗತ್ಯವಿದೆ ಎಂದು ಸೋನಿಯಾಗೆ ಮನವರಿಕೆ ಮಾಡಿದರು. |