ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡು ಬಂಡಾಯದ ಬಾವುಟ ಹಾರಿಸಿದ್ದ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಇದೀಗ ಯಡಿಯೂರಪ್ಪನೇ ನಮ್ಮ ನಾಯಕ ಎಂದು ತಿಳಿಸಿದ್ದಲ್ಲದೇ, ರಾಘವೇಂದ್ರ ನನ್ನ ಎರಡನೇ ಮಗನಿದ್ದಂತೆ ಎಂಬುದಾಗಿ ಹೇಳುವ ಮೂಲಕ ತಾವೇ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಕಲಹ ಎದ್ದಿದ್ದು, ಸರ್ಕಾರ ಉರುಳುತ್ತದೆ ಎಂಬ ಹಗಲುಗನಸಿನಲ್ಲಿದ್ದವರಿಗೆ ಈಗ ನಿರಾಸೆಯಾಗಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.
ಶನಿವಾರ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಮತದಾರರಿಗೆ ಕೃತಜ್ಞತೆ ಹಾಗೂ ಸಂಸದ ಬಿ.ವೈ.ರಾಘವೇಂದ್ರ, ನಗರಸಭಾ ಅಧ್ಯಕ್ಷ ಎನ್.ಜೆ.ರಾಜಶೇಖರ್, ಸೂಡಾ ಅಧ್ಯಕ್ಷ ಜ್ಞಾನೇಶ್ವರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಿರಿಯ ವ್ಯಕ್ತಿಯಾಗಿರುವ ರಾಘವೇಂದ್ರ ಅವರು ಲೋಕಸಭಾ ಚುನಾವಣೆಯಲ್ಲಿ ಒಬ್ಬ ಹಿರಿಯ ಮುಖಂಡ, ಹಳೆ ಹುಲಿಯನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ. ನನ್ನ ಮಗನಂತೆಯೇ ಕೂಡ, ನನ್ನ ಎರಡನೇ ಮಗ ಎಂದು ಹೇಳಿದರು.ಮುಂದೆಯೂ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಇನ್ನೂ ಉತ್ತಮ ಸ್ಥಾನ ಪಡೆಯಬೇಕು ಎಂದು ಆಶಿಸಿದರು.
ಭಾರತೀಯ ಜನತಾ ಪಕ್ಷದಲ್ಲಿ ಸಣ್ಣ ಪ್ರಮಾಣದ ಬಿಕ್ಕಟ್ಟು ಸೃಷ್ಟಿಯಾಗಿತ್ತು, ಈಗ ಬಿಕ್ಕಟ್ಟು ಶಮನವಾಗಿದೆ. ಮಾಧ್ಯಮಗಳಿಂದಾಗಿ ಭಿನ್ನಮತ ಜಗಜ್ಜಾಹೀರಾಗುವ ಮೂಲಕ ಗೊಂದಲ ಹೆಚ್ಚಾಯಿತು ಅಷ್ಟೇ. ಇದೇ ಬಿಕ್ಕಟ್ಟು ಬೇರೆ ಪಕ್ಷದಲ್ಲಿ ಉಂಟಾಗಿದ್ದರೆ ಹೊಡೆದಾಡುವ ಮಟ್ಟಕ್ಕೆ ಹೋಗುತ್ತಿತ್ತು. ಆದರೆ ನಮ್ಮ ಪಕ್ಷದಲ್ಲಿ ಹಾಗಾಗುವುದಿಲ್ಲ ಎಂದರು.
|