ರಾಜ್ಯಕ್ಕೆ ಹಿರಿಯ ನಾಯಕ ರಾಜ್ಯದ ಬಿಜೆಪಿ ಪಕ್ಷದ ಉಸ್ತುವಾರಿ ಹೊತ್ತಿರುವ ಅರುಣ್ ಜೇಟ್ಲಿ ಭೇಟಿಯಿಂದ ತಮ್ಮಲ್ಲಿದ್ದ ಭಿನ್ನಾಭಿಪ್ರಾಯ, ಗೊಂದಲ ಸಮಸ್ಯೆ ಬಗೆಹರಿದಿದೆ ಎಂದು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಹೀಗೆ ಹೇಳುವ ಮೂಲಕ ತಮ್ಮಲ್ಲಿ ಭಿನ್ನಾಭಿಪ್ರಾಯವಿತ್ತು ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಜೇಟ್ಲಿ ಜೊತೆ ಮಾತುಕತೆ ನಡೆಸಿರುವುದು ಫಲಪ್ರದವಾಗಿದೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಪುನರುಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಬಿಜೆಪಿ ಸರ್ಕಾರದ ವಾರ್ಷಿಕ ಸಾಧನಾ ಸಮಾವೇಶಕ್ಕೆ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಂಗಳೂರು ಸಮಾವೇಶಕ್ಕೆ ಪಾಲ್ಗೊಳ್ಳಬೇಕಿತ್ತು. ಕಾರಣಾಂತರಗಳಿಂದ ಹೋಗಲು ಸಾಧ್ಯವಾಗಲಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ದಾವಣಗೆರೆ ವಿಭಾಗೀಯ ಸಮಾವೇಶದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಸಂಘಟನೆ, ಪಕ್ಷ ಎಲ್ಲವೂ ಸರಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ತಮ್ಮ ನಡುವೆ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದ್ದಾರೆ. |