ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಮುಂದೂಡದೆ ನಿಗದಿತ ಅವಧಿಯಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಸ್ಪಷ್ಟಪಡಿಸಿದರು. ಜುಲೈ 31ರೊಳಗೆ ಚುನಾವಣೆ ನಡೆಸಬೇಕು ಎಂಬುದು ಸರ್ಕಾರದ ಆಶಯ ಎಂದರು.
ಬೆಂಗಳೂರು ನಗರದ ಎಲ್ಲ ಬಿಜೆಪಿ ಶಾಸಕರು, ಸಂಸದರೊಂದಿಗೆ ಸಭೆ ನಡೆಸಿ ಚರ್ಚಿಸಿದ ಬಳಿಕ ಯಡಿಯೂರಪ್ಪ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಚುನಾವಣಾ ಪೂರ್ವ ಸಿದ್ಧತೆ ಕಾರ್ಯವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಹೈಕೋರ್ಟ್ ಆದೇಶದಂತೆ ಬಿಬಿಎಂಪಿಗೆ ಚುನಾವಣೆ ನಡೆಸುವ ಸಂಬಂಧ ಇಂದು ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಸಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಚುನಾವಣೆಗೆ ಪೂರಕವಾದ ಚಟುವಟಿಕೆಗಳನ್ನು ತೀವ್ರಗೊಳಿಸಲು ತೀರ್ಮಾನಿಸಲಾಗುತ್ತದೆ . ಈಗಾಗಲೇ ವಾರ್ಡ್ ವಿಂಗಡಣೆ, ಮೀಸಲಾಗಿ ನಿಗದಿ, ಮತದಾರರ ಪಟ್ಟಿ ಮತ್ತಿತರ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ ಎಂದರು. |