ಅಮೆರಿಕಾದಿಂದ ವಾಪಸು ಬಂದಿರುವ ಬೆಂಗಳೂರು ನಿವಾಸಿಗಳಿಬ್ಬರಿಗೆ ಹಂದಿ ಜ್ವರ ತಗುಲಿರುವುದು ಖಚಿತಪಟ್ಟಿದ್ದು, ಇದರೊಂದಿಗೆ ದೇಶಾದ್ಯಂತ ಪತ್ತೆಯಾದ ಪ್ರಕರಣಗಳ ಸಂಖ್ಯೆ 20ಕ್ಕೇರಿದೆ.
"29ರ ಹರೆಯದ ತಾಯಿ ಮತ್ತು ಮಗು ಶುಕ್ರವಾರ ಬೆಳಿಗ್ಗೆ ನ್ಯೂಜೆರ್ಸಿಯಿಂದ ಬೆಂಗಳೂರಿಗೆ ಬಂದಿದ್ದರು. ಅವರಿಗೆ ಎಚ್1ಎನ್1 ವೈರಸ್ ತಗುಲಿರುವುದು ಶನಿವಾರ ರಾತ್ರಿ ಪರೀಕ್ಷೆಗಳಿಂದ ಖಚಿತವಾಗಿದೆ" ಎಂದು ರಾಜೀವ ಗಾಂಧಿ ಎದೆ ರೋಗಗಳ ಆಸ್ಪತ್ರೆಗಳ ನಿರ್ದೇಶಕ ಶಶಿಧರ್ ಬುಗ್ಗಿ ಸ್ಪಷ್ಟಪಡಿಸಿದ್ದಾರೆ.
"ಪರೀಕ್ಷೆಗಳಿಂದ ಬಂದಿರುವ ಫಲಿತಾಂಶಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ. ತಾಯಿ ಮತ್ತು ಮಗು ಈಗ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಭಾನುವಾರ ಬುಗ್ಗಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಹಂದಿ ಜ್ವರದ ಪ್ರಮಾಣ ದೇಶದಾದ್ಯಂತ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಭಾನುವಾರ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಪ್ರತಿಷ್ಠಾನಗಳನ್ನೊಳಗೊಂಡ ವಿಚಕ್ಷಣಾ ಸಮಿತಿಯ ಸಭೆಯನ್ನು ಆರೋಗ್ಯ ಸಚಿವಾಲಯವು ನಡೆಸಲಿದೆ.
ಶನಿವಾರ ಹೈದರಾಬಾದ್‌ನಲ್ಲಿ 20ರ ಹರೆಯದ ಯುವಕನೊಬ್ಬನಿಗೆ ನಡೆಸಿದ ಪರೀಕ್ಷೆಯಲ್ಲೂ ಎಚ್1ಎನ್1 ವೈರಸ್ ಇರುವುದು ಕಂಡು ಬಂದಿತ್ತು. ಶುಕ್ರವಾರವಷ್ಟೇ ಆತನ ಆರು ವರ್ಷದ ಸಹೋದರಿಗೆ ಈ ರೋಗ ತಗುಲಿರುವುದು ಪತ್ತೆಯಾಗಿತ್ತು.
ವಿಶ್ವ ಆರೋಗ್ಯ ಸಂಸ್ಥೆಯ ದಾಖಲೆಗಳ ಪ್ರಕಾರ 74 ದೇಶಗಳಲ್ಲಿ ಹಂದಿ ಜ್ವರ ವ್ಯಾಪಿಸಿದ್ದು, 29,669 ಪ್ರಕರಣಗಳು ಖಚಿತಪಟ್ಟಿವೆ ಮತ್ತು 145 ಮಂದಿ ಸಾವನ್ನಪ್ಪಿದ್ದಾರೆ.
ನಿನ್ನೆ ಅಮೆರಿಕಾದಿಂದ ಬೆಂಗಳೂರಿಗೆ ಬಂದಿದ್ದ ಐವರಿಗೆ ಹಂದಿ ಜ್ವರ ತಗುಲಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅವರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ರಕ್ತದ ಮಾದರಿಯನ್ನು ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ; ಬೆಂಗಳೂರಿನ ನಿವಾಸಿಗಳಾಗಿರುವ ಇವರು ಕಾರ್ಯನಿಮಿತ್ತ ಅಮೆರಿಕಾಕ್ಕೆ ತೆರಳಿದ್ದರು.
ಈ ನಡುವೆ ಎಚ್1ಎನ್1 ಸೋಂಕಿನ ಶಂಕೆಯಿಂದ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಕಳದ ನಿವಾಸಿ ವಿಶ್ವನಾಥ ಅವರಿಗೆ ಸೋಂಕು ಇಲ್ಲ ಎಂದು ಪರೀಕ್ಷೆಯಿಂದ ದೃಢಪಟ್ಟಿದೆ.
|