ತನ್ನ ಅತ್ತೆಯನ್ನು ಮೃತ ವೃದ್ದೆ ಎಂದು ಬಿಂಬಿಸಿ 9 ಕೋಟಿ ರೂ. ಆಸ್ತಿ ಲಪಟಾಯಿಸಲು ಸಂಚು ರೂಪಿಸಿದ್ದ ಒಂಭತ್ತು ಮಂದಿಯನ್ನು ಸಿಬಿಐ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಮೃತಪಟ್ಟಿದ್ದ ಕೋಟ್ಯಾಧಿಪತಿ ವೃದ್ದೆ ಚಂದ್ರಿಕಾ ಅವರ ಆಸ್ತಿಯನ್ನು ದೋಚುವ ನಿಟ್ಟಿನಲ್ಲಿ ಪ್ರಮುಖ ಆರೋಪಿ ವೆಂಕಟೇಶ್ ತನ್ನ ಅತ್ತೆ ನವಮಣಿ ಎಂಬುವವರನ್ನು ಚಂದ್ರಿಕಾ ಎಂದು ನಮೂದಿಸಿದ ದಾಖಲೆ ಸೃಷ್ಟಿಸಿ ಚಂದ್ರಿಕಾ ಅವರ ಹೆಸರಿನಲ್ಲಿದ್ದ ಆಸ್ತಿ ಲಪಟಾಯಿಸಲು ಯತ್ನಿಸಿದ್ದರು.
ಈ ಕಾರ್ಯದಲ್ಲಿ ವೆಂಕಟೇಶ್‌ಗೆ ಸಹಕರಿಸಿದ್ದ ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಬೆಂಗಳೂರು ಹಾಗೂ ಚೆನ್ನೈನ ಕೋಟ್ಯಂತರ ರೂ. ಮೊತ್ತದ ಆಸ್ತಿಗಳ ದಾಖಲೆಗಳು, 2 ಲಕ್ಷ ರೂ. ನಗದು 5.75 ಲಕ್ಷ ರೂ. ಮೊತ್ತದ ಬ್ಯಾಂಕ್ ಡಿಪಾಸಿಟ್‌ಗಳು ಹಾಗೂ 50ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ತಿಳಿಸಿದ್ದಾರೆ.
ಶ್ರೀರಾಮಪುರದ ನಾಗಪ್ಪ ಬ್ಲಾಕ್‌ನ ನಿವಾಸಿ ಕುಮಾರಿ ಕೆ.ಬಿ. ಚಂದ್ರಾ ಅಲಿಯಾಸ್ ಚಂದ್ರಿಕಾ ಅವರಿಗೆ ಈ ಆಸ್ತಿ ಸೇರಿದ್ದು, ಇವರೊಬ್ಬರು ಏಕಾಂಗಿಯಾಗಿದ್ದರು. ಆದರೆ ಕಳವು ಮಾಡಲೆಂದು ಅವರ ಮನೆಗೆ ನುಗ್ಗಿದ್ದ ಚಿಂದಿ ಆಯುವ ವಿಕ್ಕಿ ಆಲಿಯಾಸ್ ವಿಕ್ರಂ ಹಾಗೂ ಮತ್ತೊಬ್ಬ ಆರೋಪಿಗೆ ಮನೆಯ ಹಾಲ್‌ನಲ್ಲಿ ಬಿದ್ದಿದ್ದ ಅಸ್ಥಿ ಪಂಜರ ದೊರೆತಿತ್ತು. ಅಸ್ಥಿಪಂಜರದ ಮೇಲಿನ ಚಿನ್ನಾಭರಣ ದೋಚಿದ ಆರೋಪಿಗಳು ಮೃತದೇಹವನ್ನು ಶ್ರೀರಾಮಪುರದ ದೊಡ್ಡ ಮೋರಿಯಲ್ಲಿ ಎಸೆದಿದ್ದಾರೆ. |