ಮೋರಿಯಲ್ಲಿ ಕೊಚ್ಚಿ ಹೋದ ಅಭಿಷೇಕನ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ನಗರದಲ್ಲಿ ಇಂತಹಾ ಘಟನೆ ಮರುಕಳಿಸದಂತೆ ತಡೆಯಲು 'ಮುಂಗಾರು ನಿರ್ವಹಣೆ ಕಾರ್ಯಪಡೆ'ಯನ್ನು ರಚಿಸಿದೆ.
ನಗರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಪರೀಶೀಲನೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳು, ಶಾಸಕರು ಮತ್ತು ಸಂಸದರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಾಗೆ ನಗರದ ರಾಜಕಾಲುವೆ ಅತಿಕ್ರಮಿಸಿ ನಿರ್ಮಿಸಲಾಗಿರುವ ನೂರಾರು ಅಕ್ರಮ ಕಟ್ಟಡಗಳ ತೆರವಿಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಸಂಸದ ಮತ್ತು ಅಬೈಡ್ ಉಪಾಧ್ಯಕ್ಷ ಅನಂತ್ಕುಮಾರ್, ಬೆಂಗಳೂರು ಉಸ್ತುವಾರಿ ಹೊಣೆ ಹೊತ್ತಿರುವ ಸಚಿವರಾದ ಆರ್. ಅಶೋಕ್ ಹಾಗೂ ಕಟ್ಟಾಸುಬ್ರಮಣ್ಯ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಮುಂಗಾರು ನಿರ್ವಹಣೆ ಕಾರ್ಯಪಡೆ ರಚಿಸಲಾಗಿದ್ದು, ಮುಂಗಾರು ಮಳೆಯಿಂದ ನಗರದಲ್ಲಿ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಕಾರ್ಯಪಡೆಯನ್ನು ಸಿದ್ಧಪಡಿಸಿ ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಮುಂಗಾರು ನಿರ್ವಹಣೆ ಕಾರ್ಯಪಡೆಯು ನಗರದ ಚರಂಡಿ ಹೂಳೆತ್ತುವ, ತಡೆಗೋಡೆಯನ್ನು ಗಟ್ಟಿಗೊಳಿಸುವ ಕೆರೆ ಹೂಳೆತ್ತುವ ಸೇರಿದಂತೆ ಮಳೆಗಾಲದಲ್ಲಿ ನಗರದಲ್ಲಿ ಉಂಟಾಗುವ ಅನಾಹುತಗಳ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಹಾಗೆ ಮಳೆಯಿಂದ ಅನಾಹುತಕ್ಕೆ ಒಳಗಾಗುವ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಮಳೆ ನೀರು ನುಗ್ಗದಂತೆ ಶಾಶ್ವತ ಕಾಮಗಾರಿ ಕೈಗೊಳ್ಳುವಂತೆ ಶಿಫಾರಸು ಮಾಡಲಿದೆ. ಅಲ್ಲದೆ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲು, ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು. |