ಲೋಕಸಭಾ ಚುನಾವಣೆಯಲ್ಲಿ ಸೋತ ಕಾರಣ ರಾಜಕೀಯ ಬದುಕಿನಿಂದ ನಿವೃತ್ತಿ ಹೊಂದುವವನು ನಾನಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಇದೇ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜನತೆ ರಾಘವೇಂದ್ರರನ್ನು ಜನ ಮೆಚ್ಚಿಕೊಂಡು ಗೆಲ್ಲಿಸಲಿಲ್ಲ. ಇದು ಬಿಜೆಪಿಯ ಗೆಲುವು ಅಲ್ಲ. ಹಣ ಹೆಂಡದ ಬಲದ ಮೇಲೆ ರಾಘವೇಂದ್ರ ಜಯಗಳಿಸಿದ್ದಾರೆ. ಚುನಾವಣೆಯಲ್ಲಿ 100 ಕೋಟಿ ಖರ್ಚು ಮಾಡಿದ್ದಾರೆ. 100 ಕೋಟಿಯನ್ನು ಬೇರೆ ಯಾರು ಖರ್ಚು ಮಾಡಿದ್ದರೂ ಗೆಲ್ಲುತ್ತಿದ್ದರು, ಮುಖ್ಯಮಂತ್ರಿ ಯಡಿಯೂರಪ್ಪನವರ ಮಗನೇ ನಿಲ್ಲಬೇಕಾದ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಜನರನ್ನು ನಂಬಿ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ ಜನರು ಯಾಕೋ ತಮ್ಮನ್ನು ತಿರಸ್ಕರಿಸಿದ್ದಾರೆ. ಜನರ ಈ ತಿರಸ್ಕಾರಕ್ಕೆ ಏನು ಕಾರಣ ಎಂದು ತಿಳಿಯುತ್ತಿಲ್ಲ ಎಂದರು. ತಮಗೆ ಮತ ಹಾಕಿದ ಮತದಾರರಿಗೆ ಅಭಿನಂದನೆಗಳು ಎಂದರು.
ಸಾಗರ ಮತ್ತು ಸೊರಬ ತಾಲೂಕುಗಳಲ್ಲಿ ಭೂ ಸುಧಾರಣಾ ಕಾನೂನಿನ ಅಡಿಯಲ್ಲಿ ಜನರಿಗೆ ಭೂಮಿ ಸಿಗುವಂತೆ ಮಾಡಿದ್ದೇನೆ, ಜಿಲ್ಲೆಯಲ್ಲಿ ಜನರಿಗಾಗಿ ಮೆಗ್ಗಾನ್ ಆಸ್ಪತ್ರೆ ನಿರ್ಮಿಸಿದ್ದೇನೆ. ಶಿವಮೊಗ್ಗ ಜನರಿಗೆ ಗಾಜನೂರಿನಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ಇಷ್ಟೆಲ್ಲಾ ಅನುಕೂಲ ಮಾಡಿದ್ದು ತಪ್ಪೇ? ಭೂಮಿ ಪಡೆದ ಜನ, ನೀರು ಕುಡಿದ ಜನ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಜನ ನನಗೆ ಚುನಾವಣೆಯಲ್ಲಿ ಓಟು ಹಾಕಿಲ್ಲ. ಎಲ್ಲರೂ ಹಾಕಿಲ್ಲವೆಂದು ಹೇಳುವಂತೂ ಇಲ್ಲ ಎಂದು ತುಂಬಾ ನೊಂದುಕೊಂಡು ಹೇಳಿದರು. ಮುಂದಿನ ಹೆಜ್ಜೆ ಏನೆಂದು ಕೇಳಿದ ಪ್ರಶ್ನೆಗೆ ಕಾದು ನೋಡಿ ಎಂದು ಒಂದೇ ಮಾತಿನಲ್ಲಿ ಹೇಳಿ ಮುಗಿಸಿದರು. |