ನಗರದಲ್ಲಿ ಎರಡು ಹಂದಿ ಜ್ವರ ಪ್ರಕರಣಗಳು ಪತ್ತೆಯಾಗಿರುವುದು ಖಚಿತವಾಗಿದ್ದರಿಂದ ರೋಗಿಗಳ ಪರೀಕ್ಷೆಗಾಗಿ ಹಾಗೂ ಚಿಕಿತ್ಸೆ ನೀಡಲು ಅಂತಾರಾಷ್ಟ್ರೀಯ ಗುಣಮಟ್ಟದ ಸಂಪೂರ್ಣ ಸುಸಜ್ಜಿತ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಕರ್ನಾಟಕ ಸರಕಾರ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ಡೈರೆಕ್ಟೋರೇಟ್ ಜನರಲ್ ಆಫ್ ಹೆಲ್ತ್ ಸರ್ವಿಸಸ್ ಆಫ್ ಇಂಡಿಯಾ ಅವರಿಗೆ ಹಂದಿ ಜ್ವರ ಪತ್ತೆಗಾಗಿ ಕೇಂದ್ರವನ್ನು ಸ್ಥಾಪಿಸುವಂತೆ ಒತ್ತಾಯಿಸಿ ರಾಜ್ಯ ಸರಕಾರ ಪತ್ರಬರೆದಿದೆ ಎಂದು ರಾಜೀವ್ ಗಾಂಧಿ ಹೃದಯ ರೋಗ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ಶಶಿಧರ್ ಬುಗ್ಗಿ ತಿಳಿಸಿದ್ದಾರೆ.
ಶುಕ್ರವಾರದಂದು ರಾತ್ರಿ ನ್ಯೂಜೆರ್ಸಿಯಿಂದ ಭಾರತಕ್ಕೆ ಆಗಮಿಸಿದ ತಾಯಿ ಮತ್ತು ಮಗು ಹಂದಿ ಜ್ವರದಿಂದ ಬಳಲುತ್ತಿರುವುದು ಪತ್ತೆಯಾಗಿದ್ದು, ಇಲ್ಲಿಯವರೆಗೆ ದೇಶದಲ್ಲಿ ಕನಿಷ್ಟ 20 ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.
ತಾಯಿ ಮತ್ತು ಮಗುವಿಗೆ ಹಂದಿ ಜ್ವರದಿಂದ ಬಳಲುತ್ತಿರುವುದು ಖಚಿತವಾದ ನಂತರ ರಾಜ್ಯದಲ್ಲಿ ಇಲ್ಲಿಯವರೆಗೆ ಹೊಸ ಪ್ರಕರಣಗಳು ವರದಿಯಾಗಿಲ್ಲ. ತಾಯಿ ಮತ್ತು ಮಗುವನ್ನು 10 ರಿಂದ 14 ದಿನಗಳವರೆಗೆ ಆಸ್ಪತ್ರೆಯಲ್ಲಿರಿಸಲಾಗುತ್ತಿದ್ದು, ಸ್ಯಾಂಪಲ್ಸ್‌ಗಳನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲೋಜಿಗೆ ಕಳುಹಿಸಿಕೊಡಲಾಗುವುದು. ರೋಗದಿಂದ ಸಂಪೂರ್ಣ ಗುಣಮುಕ್ತರಾದ ನಂತರ ಮನೆಗೆ ಕಳುಹಿಸಿಕೊಡಲಾಗುವುದು. ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ 400 ರೋಗಿಗಳಿಗಾಗುವಷ್ಟು ಔಷಧಿ ಟಾಮಿ ಫ್ಲೂ ವ್ಯಾಕ್ಸಿನ್ ಲಭ್ಯವಿದ್ದು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಂಕಿತ ರೋಗಿಗಳನ್ನು ಪರಿಕ್ಷಿಸಲಾಗುತ್ತಿದ್ದು, ನೆಗಟಿವ್ ಕಂಡುಬಂದಲ್ಲಿ ಮನೆಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಡಾ.ಬುಗ್ಗಿ ತಿಳಿಸಿದ್ದಾರೆ. |