ಕಳೆದ ಕೆಲ ದಿನಗಳ ಹಿಂದೆ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಕೈಗಾ ಅಣು ವಿದ್ಯುತ್ ಸ್ಥಾವರದ ವೈಜ್ಞಾನಿಕ ಅಧಿಕಾರಿ ಮಹಾಲಿಂಗಂ ಅವರ ಮೃತ ದೇಹ ಕಾಳಿನದಿಯಲ್ಲಿ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದಾಗಿ ಸಂಶಯಿಸಲಾಗಿದೆ.
ಪತ್ತೆಯಾದ ಇವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಮತ್ತು ಡಿಎನ್ಎ ಪರೀಕ್ಷೆಗೆ ಒಳಪಡಿಸಿದ ನಂತರ ವೈದ್ಯರು ಈ ವಿಚಾರ ಬಹಿರಂಗ ಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾಲಿಂಗಂ ಅವರ ದೇಹ ಪತ್ತೆಯಾಗಿದ್ದ ವೇಳೆ ಗುರುತು ಪತ್ತೆ ಹಚ್ಚಲು ಸಾಧ್ಯವಾಗದೆ ಗೊಂದಲ ಉಂಟಾಗಿತ್ತು. ಮಹಾಲಿಂಗಂ ಅವರ ಪತ್ನಿ ಸುಂದರಿ ಅವರಿಗೂ ತನ್ನ ಪತಿಯ ದೇಹವನ್ನು ಗುರತಿಸಲು ಮೊದಲಿಗೆ ಸಾಧ್ಯವಾಗಿರಲಿಲ್ಲ, ಆದರೆ ಬಳಿಕ ಇದು ತನ್ನ ಪತಿಯ ದೇಹವೆಂದು ಒಪ್ಪಿಕೊಂಡಿದ್ದರು.
ಸಂಶಯಕ್ಕೆ ಎಡೆ ಮಾಡಿಕೊಟ್ಟ ಮಹಾಲಿಂಗಂ ಅವರ ಮೃತದೇಹದ ಹಲ್ಲು, ಚರ್ಮ, ಪಿತ್ತಜನಕಾಂಗ ಹಾಗೂ ಮೆದುಳಿನ ಕೆಲ ಭಾಗವನ್ನು ಹೈದರಾಬಾದಿನ ವಿಧಿ ವಿಜ್ಞಾನ ಸಂಸ್ಥೆಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾಲಿಂಗಂ ಅವರು ಮುಂಜಾನೆಯ ವಾಯುವಿಹಾರಕ್ಕೆ ತೆರಳಿದವರು ಒಂದು ವಾರದ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. |