ರಾಜ್ಯದಲ್ಲಿ ಅಧಿಕಾರವಹಿಸಿಕೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಉತ್ಸವವನ್ನು ಆಚರಿಸುತ್ತಿರುವುದನ್ನು ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಧರ್ಮಸಿಂಗ್ ಬಲವಾಗಿ ಟೀಕಿಸಿದ್ದಾರೆ.ಬಿಜೆಪಿಯಿಂದ ಆಚರಿಸಲಾಗುತ್ತಿರುವ ವಿಕಾಸ್ ಸಂಕಲ್ಪ ಸಮಾವೇಶ ಒಂದು ರಾಜಕೀಯ ಸ್ಟಂಟ್ ಎಂದು ಬಣ್ಣಿಸಿದ ಅವರು ರಾಜ್ಯದಲ್ಲಿ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳದಿರುವುದರ ಮಧ್ಯೆಯು ಪಕ್ಷ ಇಂತಹ ಉತ್ಸವಗಳನ್ನು ಆಚರಿಸುತ್ತಿರುವುದು ಎಷ್ಟು ಸರಿ ಎಂದು ಬಿಜಿಪಿ ವಿರುದ್ಧ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಭಾರತೀಯ ಜನತಾ ಪಕ್ಷ ಅಧಿಕಾರ ಯಂತ್ರವನ್ನು ದುರುಪಯೋಗಪಡಿಸಿಕೊಂಡು , ಸಾರ್ವಜನಿಕ ಹಣವನ್ನು ಪೋಲು ಮಾಡಿ ಇಂತಹ ಉತ್ಸವಗಳನ್ನು ಆಚರಿಸುತ್ತಿದೆ ಎಂದು ಟೀಕಿಸಿದರು. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಿಜೆಪಿ, ಆಂತರಿಕವಲಯದಲ್ಲಿ ಭುಗಿಲೆದ್ದ ಭಿನ್ನಮತದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ನುಡಿದರು. ಬಿಜೆಪಿ ಸರಕಾರ ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿದೆ ಎಂದು ಹೇಳಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಅಭಿವೃದ್ಧಿಗಾಗಿ ಆರ್ಥಿಕ ಸಂಗ್ರಹವನ್ನು ಮರೆತು ರಾಜ್ಯದ ಹಾಗೂ ಕೇಂದ್ರದ ಬೊಕ್ಕಸವನ್ನು ಖಾಲಿ ಮಾಡಿದ್ದಾರೆ ಎಂದು ಆರೋಪಿಸಿದರು. ಕೇಂದ್ರದ ಕಾರ್ಮಿಕ ಖಾತೆ ಸಚಿವ ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದ ನಿಯೋಗ ಶೀಘ್ರದಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿ ಹಿಂದುಳಿದ ಪ್ರದೇಶವಾದ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿ ಕಲಂ 371 ಜಾರಿಗೊಳಿಸುವಂತೆ ಹಾಗೂ ರೈಲ್ವೆ ಹಾಗೂ ಹೆದ್ದಾರಿ ಯೋಜನೆಗಳಿಗೆ ಮಂಜೂರಾತಿ ನೀಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಗುಲ್ಬರ್ಗ ಬೀದರ್ ಮತ್ತು ರಾಯಚೂರ್ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕರ್ನಾಟಕದ ಹಿಂದುಳಿದ ಪ್ರದೇಶಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೇಂದ್ರ ಐಐಟಿ ಕಾಲೇಜ್‌ಗಳನ್ನು ಆರಂಭಿಸುವಂತೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ನಿಯೋಗ ಮನವಿ ಸಲ್ಲಿಸಲಿದೆ ಎಂದರು. ಕೇಂದ್ರ ರೈಲ್ವೆ ಖಾತೆ ಸಚಿವ ಮಮತಾ ಬ್ಯಾನರ್ಜಿ, ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ನೆನೆಗುದಿಗೆ ಬಿದ್ದಿರುವ ಹಲವು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.ಇದಕ್ಕಿಂತ ಮೊದಲು , ಸಂಸದ ಧರ್ಮಸಿಂಗ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಕಾಂಗ್ರೆಸ್ ಸಂಸದರು ಹಾಗೂ ಶಾಸಕರ ಸಭೆ ನಡೆದು ಹಲವಾರು ವಿಷಯಗಳ ಕುರಿತಂತೆ ಚರ್ಚಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ. |