ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡ ಶಾಸಕ ವಿ. ಸೋಮಣ್ಣ ಅವರಿಗೆ ರಾಜ್ಯಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರಕುವುದು ಬಹುತೇಕ ಖಚಿತವಾಗಿದೆ. ಆದರೆ ಯಾರ ಖಾತೆಗೆ ಕುತ್ತು ಬರುತ್ತದೆ ಎಂಬುದು ಮಾತ್ರ ಸದ್ಯಕ್ಕೆ ನಿಗೂಢವಾಗಿದೆ.
ಬರುವ ಬುಧವಾರ ಅಥವಾ ಗುರುವಾರ ಸೋಮಣ್ಣ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಆದರೆ ಸಂಪುಟದಿಂದ ಯಾರನ್ನು ಕೈಬಿಡಬೇಕು ಎಂಬುದನ್ನು ಸಂಸದ ಅನಂತ್ ಕುಮಾರ್ ಹಾಗೂ ಕೆಲ ಬಿಜೆಪಿ ನಾಯಕರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ.
ಸಚಿವ ಸಂಪುಟದಿಂದ ಹೊರ ಹಾಕುವ ಸಚಿವರ ಗತಿ ಏನು? ಮತ್ತು ಅವರಿಗೆ ಯಾವ ಅಧಿಕಾರ ಕೊಡಬೇಕು ಹಾಗೂ ಮುಂದೆ ಎದುರಿಸಬೇಕಾಗುವ ಪರಿಣಾಮದ ಕುರಿತು ಮುಖ್ಯಮಂತ್ರಿ ಬಿಜೆಪಿ ಮುಖಂಡರೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಸಂಪುಟ ಪುನಾರಚನೆ ವೇಳೆ ಇನ್ನಷ್ಟು ಬದಲಾವಣೆ ಮಾಡಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆನ್ನಲಾಗಿದ್ದು, ಯಾರ ಕುರ್ಚಿಗೆ ಕುತ್ತು ಎಂಬುದು ಗೊತ್ತಾಗಿಲ್ಲ. ಸದ್ಯದ ಮಟ್ಟಿಗೆ ಮೌನವಾಗಿದ್ದರೂ ಬೂದಿ ಮುಚ್ಚಿದ ಕೆಂಡದಂತಿರುವ ರೆಡ್ಡಿ ಸಹೋದರರ ಭಿನ್ನಾಭಿಪ್ರಾಯ ಸಚಿವ ಸಂಪುಟ ವಿಸ್ತರಣೆ ಬಳಿಕ ಏನಾಗುತ್ತದೆ ಎಂಬುದು ಕಾದು ನೋಡಬೇಕಿದೆ.
|