ಕರ್ನಾಟಕ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಸ್ಥಾನ ಕಳೆದು ಕೊಂಡಿರುವ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರು ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸಲು ದೊಡ್ಡಮಟ್ಟದ ಕಾರ್ಯತಂತ್ರ ರೂಪಿಸುವುದಾಗಿ ಘೋಷಿಸಿದ್ದಾರೆ.
ತನ್ನನ್ನು ಕೈಬಿಟ್ಟಿರುವ ಮುಖ್ಯಮಂತ್ರಿಗಳ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ತಾನೂ ಬೆಂಬಲ ನೀಡಿದ್ದೆ. ಆದರೆ ಇದೀಗ ನನ್ನನ್ನೇ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಯಡಿಯೂರಪ್ಪ ವಿರುದ್ಧ ಸಮರ ಸಾರಲಾಗುವುದು ಎಂದು ಅವರು ಹೇಳಿದ್ದಾರೆ. ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲೂ ತಾನು ಬಿಜೆಪಿಗೆ ಬೆಂಬಲ ನೀಡಿ ಹಲವೆಡೆ ಗೆಲ್ಲಿಸಿದ್ದೇನೆ. ನಮ್ಮ ಸಮಾಜ ಕೂಡ ಬಿಜೆಪಿಗೆ ಬೆಂಬಲ ಕೊಟ್ಟಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 19 ಕಡೆ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರೇ ನನ್ನ ನಾಯಕ, ಆದರೆ ಸಮುದಾಯದ ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನನ್ನ ನಾಯಕ ಎಂಬುದಾಗಿ ವರ್ತೂರು ಸೋಮವಾರ ಬೆಳಿಗ್ಗೆ ಹೇಳಿದ್ದರು. ಆದರೆ ತನ್ನ ಸ್ಥಾನಕ್ಕೆ ಕುತ್ತು ಬರುತ್ತಲೇ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸುವ ಮಾತುಗಳನ್ನು ಆಡಿದ್ದಾರೆ.
ಯಡಿಯೂರಪ್ಪ ಪ್ರತಿಕ್ರಿಯೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ವರ್ತೂರು ಪ್ರಕಾಶ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಶ್ರುತಿ ಅವರನ್ನು ತೆಗೆದು ಹಾಕಿರುವುದಕ್ಕೆ ವಿಶೇಷ ಮಹತ್ವ ನೀಡಬೇಕಿರುವ ಅಗತ್ಯ ಇಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಇದಕ್ಕೆ ಕಾರಣವೇನೆಂದು ಜನತೆಗೆ ಗೊತ್ತಿದೆ ಎಂದು ಹೇಳಿದ್ದಾರೆ.
ವರ್ತೂರ್, ಶೃತಿ ಔಟ್! ಸಿದ್ದರಾಮಯ್ಯರೇ ನಮ್ಮ ನಾಯಕ ಎಂಬುದಾಗಿ ಬಹಿರಂಗ ಹೇಳಿಕೆ ನೀಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡದೇ ದೂರ ಉಳಿದಿದ್ದ ವರ್ತೂರು ಪ್ರಕಾಶ್ ಅವರನ್ನು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ.
ಇದೇ ವೇಳೆ ಪತಿ ಮಹೇಂದರ್‌ಗೆ ವಿಚ್ಛೇದನ ನೀಡಿ ಮರುಮದುವೆಯಾಗುವುದಾಗಿ ಘೋಷಿಸಿ ವಿವಾದ ಸೃಷ್ಟಿಸಿದ್ದ ಶ್ರುತಿ ಅವರನ್ನು ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕಿತ್ತೆಸೆಯಲಾಗಿದೆ. |