ಬಿಜೆಪಿಯಲ್ಲಿ ಆಂತರಿಕ ಭಿನ್ನಮತವಿಲ್ಲ. ಬಳ್ಳಾರಿಯ ಸಚಿವರು, ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆಯ ಅಕಾಂಕ್ಷಿಗಳಲ್ಲಾ ಎಂದು ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ಭಿನ್ನಮತದ ಉಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ಸರಕಾರದ ವಿರುದ್ಧ ನಮಗೆ ಭಿನ್ನಾಭಿಪ್ರಾಯವಿದೆ ಎಂದು ನಾನು ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸುದ್ದಿಗಾರರಿಗೆ ಸಚಿವ ಕರುಣಾಕರ ರೆಡ್ಡಿ ತಿಳಿಸಿದ್ದಾರೆಆದರೆ ,ಇಂಧನ ಸಚಿವ ಕೆ.ಎಸ್.ಈಶ್ವರಪ್ಪಾ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರ ಕಾರ್ಯವೈಖರಿಯ ವಿರುದ್ಧ ಬಹಿರಂಗವಾಗಿ ಸಿಡಿದಿರುವುದನ್ನು ಪತ್ರಕರ್ತರು ಪ್ರಶ್ನಿಸಿದಾಗ , ಆ ಪ್ರಶ್ನೆಯನ್ನು ನೀವು ಸಚಿವ ಈಶ್ವರಪ್ಪಾ ಅವರಿಗೆ ಕೇಳಬೇಕು ಎಂದು ಮಾರ್ಮಿಕವಾಗಿ ಹೇಳಿದರು. ಬೆಂಗಳೂರಿನಲ್ಲಿ ನಡೆದ ವಿಕಾಸ ಸಂಕಲ್ಪ ಉತ್ಸವಕ್ಕೆ, ಆರೋಗ್ಯ ಸಚಿವ ಶ್ರೀರಾಮಲು ಮತ್ತು ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ಅವರುಗಳು ಗೈರುಹಾಜರಾಗಲು ಕಾರಣವೇನು ಎಂದು ಪ್ರಶ್ನಿಸಿದಾಗ , ಗೈರುಹಾಜರಾದ ಮಾತ್ರಕ್ಕೆ ಮುಖ್ಯಮಂತ್ರಿಯ ವಿರುದ್ಧ ಭಿನ್ನಾಭಿಪ್ರಾಯವಿದೆ ಎಂದರ್ಥವಲ್ಲ ಎಂದು ರೆಡ್ಡಿ ಸಮರ್ಥಿಸಿಕೊಂಡರು. ಬೆಂಗಳೂರಿನಲ್ಲಿ ವಿಕಾಸ ಸಂಕಲ್ಪ ಯಾತ್ರೆ ನಡೆದ ದಿನ ನಾವು ಬೆಂಗಳೂರಿನಲ್ಲಿರಲಿಲ್ಲ . ಕಾರ್ಯಕ್ರಮದ ನಿಮಿತ್ಯ ಬೇರೆಡೆಗೆ ತೆರಳಿದ್ದರಿಂದ ಗೈರುಹಾಜರಾಗಬೇಕಾಯಿತು. ನಮ್ಮ ಕಾರ್ಯಕ್ರಮದ ವಿವರಗಳನ್ನು ಮುಖ್ಯಮಂತ್ರಿಯವರಿಗೆ ನೀಡಲಾಗಿತ್ತು ಎಂದು ತಿಳಿಸಿದರು.ತಿರುಪತಿ ತಿಮ್ಮಪ್ಪನಿಗೆ 45 ಕೋಟಿ ರೂಪಾಯಿಗಳ ವೆಚ್ಚದ ವಜ್ರದ ಕಿರೀಟವನ್ನು ಸಮರ್ಪಿಸಿದ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು.ತಿರುಪತಿ ತಿಮ್ಮಪ್ಪ ಮನೆಯ ದೇವರು. ಆದು ವ್ಯಯಕ್ತಿಕ ವಿಷಯವಾಗಿದ್ದರಿಂದ ಇತರರಿಗೆ ಕೇಳುವ ಹಕ್ಕಿಲ್ಲ ಎಂದರು. ದೇವರಿಗೆ 45 ಕೋಟಿ ವೆಚ್ಚದ ಕಿರೀಟವನ್ನು ಸಮರ್ಪಿಸುವ ಬದಲು ಸಾಮಾಜಿಕ ಏಳಿಗೆಗಾಗಿ ಉಪಯೋಗಿಸಬಹುದಿತ್ತು ಎಂದು ಕೆಲವರು ಸಲಹೆ ನೀಡಿದ್ದರು . ದೇವರಿಗೆ ಭಕ್ತಿಯನ್ನು ಪ್ರದರ್ಶಿಸುವುದು ಸಂಪೂರ್ಣವಾಗಿ ವ್ಯಯಕ್ತಿಕವಾದ ಸಂಗತಿ. ಕಳೆದ ಹಲವು ವರ್ಷಗಳಿಂದ ಬಳ್ಳಾರಿಯಲ್ಲಿ ಸಾಮಾಜಿಕ ಕಾರ್ಯಗಳು ಸೇರಿದಂತೆ ಪ್ರತಿ ವರ್ಷ 10 ಸಾವಿರ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಬಡವರಿಗೆ ಕೈಲಾದಷ್ಟು ಸಹಾಯ ಮಾಡುತ್ತೇವೆ. ಇವೆಲ್ಲ ಜನಸೇವೆಗಳನ್ನು ಮಾಧ್ಯಮದವರು ಏಕೆ ಗಮನಿಸುವುದಿಲ್ಲ ಎಂದು ಸಚಿವ ಕರುಣಾಕರ ರೆಡ್ಡಿ ಮಾಧ್ಯಮದವರಿಗೆ ತಿರುಗೇಟು ನೀಡಿದರು. |