2011 ರಲ್ಲಿ ರಾಜ್ಯದಲ್ಲಿ ಜಾತ್ಯತೀತ ಜನತಾ ದಳವು ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದು ಬಿಜೆಪಿ ಸರಕಾರ ಮಧ್ಯದಲ್ಲೇ ಪತನ ಕಾಣುವ ಆಶಾಭಾವನೆ ಹೊರಗೆಡಹಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ತಾನು ಇನ್ನೈದು ವರ್ಷ ಸಕ್ರಿಯ ರಾಜಕೀಯದಲ್ಲಿರುವುದಾಗಿ ಹೇಳಿದರಲ್ಲದೆ, ಆ ಬಳಿಕ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಕುಮಾರಸ್ವಾಮಿಗೆ ಇದೆ ಎನ್ನುವ ಮೂಲಕ ಜೆಡಿಎಸ್ ಉತ್ತರಾಧಿಕಾರಿ ಯಾರೆಂಬ ಕುರಿತು ಸುಳಿವು ಹೊರಗೆಡಹಿದರು.ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ಜೆಡಿಎಸ್ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡುತ್ತಾ ಅವರು ಮಾತನಾಡಿದರು. 50 ವರ್ಷಗಳಿಂದ ದೇವೇಗೌಡ ಮತ್ತು ನಮ್ಮ ಪಕ್ಷವನ್ನು ನಾಶಗೊಳಿಸುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಕಾಂಗ್ರೆಸಿಗೆ ಎಳೆದುಕೊಳ್ಳಲೂ ನೋಡಿದರೂ, ಆದರೆ ಈ ದೇವೇಗೌಡ ಜಗ್ಗಲಿಲ್ಲ ಎಂದು ಹೇಳಿದ ಅವರು, ನೀವೇನು ಬೇಕಾದ್ರೂ ಬರೆದುಕೊಳ್ಳಿ, ನನ್ನನ್ನು ಮುಗಿಸುವ ಶಕ್ತಿ ಇರುವುದು ಈ ರಾಜ್ಯದ ಜನತೆಗೇ ಹೊರತು, ನಿಮಗಲ್ಲ ಎಂದು ಮಾಧ್ಯಮಗಳ ಮೇಲೂ ಕಿಡಿ ಹರಿಹಾಯ್ದರು.ತಮ್ಮ ಆರೋಗ್ಯ ಚೆನ್ನಾಗಿಲ್ಲ ಎಂದು ಒಪ್ಪಿಕೊಂಡ ದೇವೇಗೌಡ, ಆದರೆ, ಪಕ್ಷವನ್ನು ಉಳಿಸಿ ಬೆಳೆಸುವುದಕ್ಕೆ ತನಗೆ ಆ ಭಗವಂತ ಆಯುಷ್ಯ ಕೊಡುತ್ತಾನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ದೇವೇಗೌಡ ಹೋದ ನಂತರವೂ ಜೆಡಿಎಸ್ ನಾಶವಾಗುವುದಿಲ್ಲ, ಅದನ್ನು ಕುಮಾರ ಸಮರ್ಥವಾಗಿ ಮುನ್ನಡೆಸುವರೆಂಬ ಭರವಸೆ ವ್ಯಕ್ತಪಡಿಸಿದರು. |