ಕಾಂಗ್ರೆಸ್‌ನಿಂದ ವಲಸೆ ಬಂದಿರುವ ವಿ ಸೋಮಣ್ಣ ಅವರಿಗೆ ಸಂಪುಟ ಸೇರ್ಪಡೆಗೆ ಅನುಕೂಲ ಕಲ್ಪಿಸುವ ಸಲುವಾಗಿ ಮುಜರಾಯಿ ಸಚಿವ ಕೃಷ್ಣಯ ಶೆಟ್ಟಿ ಅವರನ್ನು ಕೈಬಿಡಲಾಗುವುದು ಎಂಬುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸನಿಹದ ಮೂಲಗಳು ತಿಳಿಸಿವೆ.
ಇದೇವೇಳೆ ಮುಖ್ಯಮಂತ್ರಿ ಅವರು ಕೆಲವು ಸಚಿವ ಖಾತೆಗಳಲ್ಲಿ ಬದಲಾವಣೆ ಮಾಡಲು ಯೋಜಿಸಿದ್ದಾರೆ ಎಂದೂ ಹೇಳಲಾಗಿದೆ. ಆದರೆ ಗುರುವಾರ ಸಣ್ಣಮಟ್ಟದ ಸಂಪುಟ ವಿಸ್ತರಣೆ ಮಾತ್ರ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಸೋಮಣ್ಣ ಗುರುವಾರ ಬೆಳಗ್ಗೆ ಸಂಪುಟ ಸಚಿವರಾಗಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆನ್ನಲಾಗಿದೆ. ಬಿಜೆಪಿ ಪಕ್ಷ ಸೇರುವ ಮೊದಲು ವರಿಷ್ಠರು ಕೊಟ್ಟ ಮಾತಿನಂತೆ ಸೋಮಣ್ಣಾಗೆ ಸಚಿವ ಸ್ಥಾನ ನೀಡಲಾಗುತ್ತಿದೆ.
ಸಂಪುಟ ಪುನಾರಚನೆಯ ಮೊದಲ ಹಂತದಲ್ಲಿ ವಿ.ಸೋಮಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದ್ದು, ಎರಡನೆ ಹಂತದಲ್ಲಿ ಮತ್ತಷ್ಟು ಬದಲಾವಣೆ ಮಾಡಲಾಗುವುದು. ಎರಡನೆ ಹಂತದಲ್ಲಿ ಸಚಿವರ ಕಾರ್ಯ ಸಾಧನೆಯ ಆಧಾರದ ಮೇಲೆ ಪ್ರಮುಖ ಖಾತೆಗಳ ಬದಲಾವಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. |