ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗಿಂತಲೂ ಮಹಾನ್ ವಚನ ಭ್ರಷ್ಟ, ಬಲು ದೊಡ್ಡ ಮೋಸಗಾರ ಎಂಬುದಾಗಿ ಕೊಳಚೆ ನಿರ್ಮೂಲನ ಮಂಡಳಿ ಅಧ್ಯಕ್ಷ ಸ್ಥಾನದಿಂದ ಹೊರದಬ್ಬಿಸಿಕೊಂಡಿರುವ ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಗುಟುರು ಹಾಕಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವನ್ನು ಬೀಳಿಸುವುದೇ ನನ್ನ ಏಕೈಕ ಗುರಿ ಎಂಬು ಶಪಥ ಮಾಡಿದ್ದಾರೆ.
ಮಂಡಳಿ ಅಧ್ಯಕ್ಷ ಸ್ಥಾನ ಕಳಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆದಿರುವುದಾಗಿ ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಒಬ್ಬ ರಾಜಕಾರಣಿಯೇ ಅಲ್ಲ ಎಂದು ಆರೋಪಿಸಿದ ವರ್ತೂರು, ಮುಂಬರುವ ಮರುಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ಮುಖ್ಯ ಗುರಿ ಎಂದಿದ್ದಾರೆ.
ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಸರಕಾರದ ವಿರುದ್ಧ ಪ್ರಚಾರ ಮಾಡುತ್ತೇನೆ. ನನ್ನ ವಜಾಗೊಳಿಸಿರುವುದು ಹಿಂದುಳಿದ ವರ್ಗದ ನಾಯಕನಿಗೆ ಮಾಡಿರುವ ಅನ್ಯಾಯ. ಈ ಅನ್ಯಾಯಕ್ಕೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ಮಾತಿಗೆ ತಪ್ಪಿದ ಕುಮಾರಸ್ವಾಮಿಗೆ ಬುದ್ಧಿ ಕಲಿಸಿದಂತೆ ಯಡಿಯೂರಪ್ಪರಿಗೂ ಜನರು ಬುದ್ದಿ ಕಲಿಸುತ್ತಾರೆ ಎಂದು ಪ್ರಕಾಶ್ ಸಿಡಿನುಡಿದಿದ್ದಾರೆ.
ವರ್ತೂರು ಪ್ರಕಾಶ್ ಅವರನ್ನು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಹಾಗೂ ಪತಿ ಮಹೇಂದರ್‌ಗೆ ವಿಚ್ಛೇದನ ನೀಡಿ ಮರುಮದುವೆಯಾಗುವುದಾಗಿ ಘೋಷಿಸಿ ವಿವಾದ ಸೃಷ್ಟಿಸಿದ್ದ ಶೃತಿ ಅವರನ್ನು ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. |