ಲೋಕಸಭೆ ಚುನಾವಣೆಯಲ್ಲಿ ತಾನು ಹೇಳಿದ ರೀತಿಯಲ್ಲಿ ಚುನಾವಣೆ ನಡೆಸದೆ ಇರುವುದೇ ಕಾಂಗ್ರೆಸ್ ಪಕ್ಷ ಅತಿ ಕಡಿಮೆ ಫಲಿತಾಂಶ ಪಡೆಯಲು ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಿನ್ನಡೆ ಸಾಧಿಸಲು ಪಕ್ಷದ ಹೈಕಮಾಂಡ್ ಕೂಡ ನೇರ ಹೊಣೆ ಎಂದು ಅವರು ಟೀಕಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 26 ಸ್ಥಾನಗಳಲ್ಲಿ ಗೆದ್ದಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ 8 ಸ್ಥಾನಗಳಿಸಿದ್ದ ಕಾಂಗ್ರೆಸ್ ಪಕ್ಷ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇವಲ 6 ಸ್ಥಾನ ಗಳಿಸಿದೆ. ಇದೊಂದು ನಾಚಿಕೆ ಪಡುವಂತಹ ವಿಷಯ ಎಂದರು. ಹಾಗೆ ಕಾಂಗ್ರೆಸ್ ಪಕ್ಷ ಗೆದ್ದಿದ್ದು 6 ಸ್ಥಾನವಾದರು ಕೇಂದ್ರದಲ್ಲಿ 4 ಮಂತ್ರಿಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೊಂದು ಸಂತಸದ ಸಂಗತಿ ಎಂದಿದ್ದಾರೆ. " ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸಬೇಕಾದರೆ ಕೆಲವೊಂದು ವ್ಯವಸ್ಥೆಯನ್ನು ಅನುಸರಿಸಬೇಕು ಎಂದಿದ್ದೆ. ಆದರೆ ಪಕ್ಷ ಆ ವ್ಯವಸ್ಥೆ ಅನುಸರಿಸದೆ ಇರುವುದೇ ಪಕ್ಷದ ಹೀನಾಯ ಸೋಲಿಗೆ ಕಾರಣವಾಗಿದೆ. ಪಕ್ಷದ ಹೈಕಮಾಂಡ್ ಈ ಬಗ್ಗೆ ಸ್ವಲ್ಪ ಗಮನ ವಹಿಸಿದ್ದರೆ 15 ಸ್ಥಾನಗಳಲ್ಲಿ ಗೆಲ್ಲಬಹುದಾಗಿತ್ತು" ಎಂದರು. |