ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ರೆಡ್ಡಿ ಸಹೋದರರು ಮತ್ತು ಈಶ್ವರಪ್ಪ ಅವರು ದಾವಣಗೆರೆಯಲ್ಲಿ ನಡೆದ ವಿಕಾಸ ಸಂಕಲ್ಪ ಉತ್ಸವದಲ್ಲಿ ಭಾಗವಹಿಸಿ ತಾವು ರಾಜಿಯಾಗಿರುವ ಸಂದೇಶ ನೀಡಿದ್ದಾರೆ.
ರೆಡ್ಡಿ ಸಹೋದರರು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ನಡೆದ ವಿಕಾಸ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳದೆ ದೂರ ಉಳಿದಿದ್ದರು. ಸಚಿವರಾದ ಕರುಣಾಕರ ರೆಡ್ಡಿ, ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಹಾಗೂ ಈಶ್ವರಪ್ಪ ಅವರುಗಳು ವೇದಿಕೆಯಲ್ಲಿ ಕಂಗೊಳಿಸುತ್ತಾ ಕೈಕೈ ಜೋಡಿಸಿದರು.
ಶೆಟ್ಟರ್ ಗೈರು ಇದೇವೇಳೆ, ತನ್ನನ್ನು ವಿಧಿವತ್ತಾಗಿ ಆಹ್ವಾನಿಸಲಿಲ್ಲ ಎಂದು ಮುನಿಸಿಕೊಂಡಿರುವ ಸ್ಪೀಕರ್ ಜಗದೀಶ್ ಶೆಟ್ಟರ್ ಸಮಾರಂಭದಲ್ಲಿ ಹಾಜರಾಗಲಿಲ್ಲ. ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಶೆಟ್ಟರ್ ಅವರ ಅಧ್ಯಕ್ಷತೆ ಎಂದು ಮುದ್ರಿಸಲಾಗಿದೆಯಾದರೂ ಅವರನ್ನೂ ಜಿಲ್ಲಾಧಿಕಾರಿಯವರು ಸೂಕ್ತರೀತಿಯಲ್ಲಿ ಆಹ್ವಾನಿಸದೆ ಶಿಷ್ಟಾಚಾರ ಪಾಲಿಸಲಿಲ್ಲ ಎಂದು ದೂರಿದ್ದಾರೆ. ಮತ್ತು ಇದರಿಂದ ಸ್ಪೀಕರ್ ಸ್ಥಾನಕ್ಕೆ ಅವಮಾನಿಸಲಾಗಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ.
ಬೇಜಾನ್ ಪ್ರತಿಭಟನೆಗಳು! ರೈತ ಸಂಘಟನೆಯ ಮುಖಂಡರು ಹಾಗೂ ನೂರಾರು ರೈತರು ಜಿಲ್ಲೆಯಲ್ಲಿ ಕಾರ್ಯಸ್ಥಗಿತಗೊಂಡಿರುವ ಭದ್ರಾ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು ಎಂಬ ಬೇಡಿಕೆಯನ್ನು ಉತ್ಸವಕ್ಕೆ ಬಂದ ಮುಖ್ಯಮಂತ್ರಿಗಳ ಮುಂದಿಟ್ಟರು. ಈ ಸಂದರ್ಭದಲ್ಲಿ ರೈತರು ಸಿಎಂ ವಿರುದ್ಧ ಪ್ರತಿಭಟನೆ ನಡೆಸಿದರು.
ಇದೇವೇಳೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಮತ್ತೊಂದೆಡೆ, ಸಾದರ ಲಿಂಗಾಯಿತರು ಯಡಿಯೂರಪ್ಪ ಅವರಿಗೆ ಮುತ್ತಿಗೆ ಹಾಕಿದರು. |