ಆಂಗ್ಲಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವಂತೆ ಹೈಕೋರ್ಟ್ ಪೂರ್ಣಪೀಠ ನೀಡಿರುವ ಆದೇಶವನ್ನು ಒಂದು ವಾರದಲ್ಲಿ ಜಾರಿಗೊಳಿಸದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಗಾರ್ಡನ್ ಶಾಲೆ ಮತ್ತು ಇತರ 9ಶಾಲೆಗಳು ಈ ಬಗ್ಗೆ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್, ಆಂಗ್ಲಮಾಧ್ಯದಲ್ಲಿ ಬೋಧಿಸಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಯಾಕೆ ಮಾನ್ಯ ಮಾಡಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಜುಲೈ ಎರಡರಂದು ಹೈಕೋರ್ಟ್ ಪೂರ್ಣಪೀಠ ಆಂಗ್ಲಮಾಧ್ಯಮದಲ್ಲಿ ಬೋಧಿಸಲು ಅನುಮತಿ ನೀಡಿದ್ದರೂ, ಸರ್ಕಾರ ಅದನ್ನು ಮಾನ್ಯ ಮಾಡಿಲ್ಲ ಎಂದು ಆಕ್ಷೇಪಿಸಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.
ಈ ವಿಷಯ ಸುಪ್ರೀಂಕೋರ್ಟ್ ಇರುವುದರಿಂದ ಅನುಮತಿ ನೀಡಲು ಸಾಧ್ಯವಿಲ್ಲ ಎಂಬುದು ಸರ್ಕಾರದ ವಾದ. ಆದರೆ ಇದನ್ನು ಒಪ್ಪದ ನ್ಯಾಯಾಲಯ, ಸುಪ್ರೀಂಕೋರ್ಟ್ ಆದೇಶಕ್ಕೆ ಬದ್ದವಾಗಿರಬೇಕು ಎಂಬ ಷರತ್ತು ವಿಧಿಸಿ ಅನುಮತಿ ನೀಡಿ ಎಂದು ಆದೇಶಿಸಿದೆ. |