ಬಡ ಮಕ್ಕಳಿಗೆ ಮಧ್ನಾಹ್ನದ ಬಿಸಿಯೂಟ ನೀಡುವ ನೆಪದಲ್ಲಿ ವಿದೇಶಿಯರಿಂದ ಕೋಟ್ಯಂತರ ರೂಪಾಯಿ ದೇಣಿಗೆ ಪಡೆಯುತ್ತಿರುವ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆಗೆ ನೀಡುತ್ತಿರುವ ಅನುದಾನ ಕೂಡಲೇ ನಿಲ್ಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಷಯ ಪಾತ್ರೆ ಯೋಜನೆಗೆ ಸರ್ಕಾರದಿಂದ ಇಸ್ಕಾನ್ ಅನುದಾನ ಪಡೆಯುತ್ತಿದೆ. ಹೀಗಿದ್ದರೂ ಮಕ್ಕಳ ಹೆಸರಿನಲ್ಲಿ ವಿದೇಶಗಳಿಂದ ಕೋಟ್ಯಂತರ ರೂ.ದೇಣಿಗೆ ಸಂಗ್ರಹಿಸುತ್ತಿದೆ. ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಕ್ಕೆ ಖಾಸಗಿಯವರಿಂದ ದೇಣಿಗೆ ಸಂಗ್ರಹಿಸುವುದು ಸರಿಯಲ್ಲ ಎಂದರು.
ಬೆಂಗಳೂರು ವಿ.ವಿ.ಪ್ರಶ್ನೆ ಪತ್ರಿಕೆ ಬಯಲು ಹಾಗೂ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಅವ್ಯವಹಾರ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆಯೂ ಡಿಕೆಶಿ ಈ ಸಂದರ್ಭದಲ್ಲಿ ಒತ್ತಾಯಿಸಿದರು. ಎಬಿವಿಪಿ ಕಾರ್ಯಕರ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೆಂಗಳೂರು ವಿ.ವಿ.ಪ್ರಶ್ನೆ ಪತ್ರಿಕೆ ಬಯಲು ಮಾಡಲಾಗಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ಹೇಳಿದರು.
|