ರಾಜ್ಯ ಮುಜರಾಯಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ ಪರಿಣಾಮ ವಿ.ಸೋಮಣ್ಣಗೆ ಸಚಿವ ಸಂಪುಟ ಸೇರುವ ಹಾದಿ ಸುಗಮವಾದಂತಾಗಿದೆ.
ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಚಿವ ಕೃಷ್ಣಯ್ಯ ಶೆಟ್ಟಿ ಸ್ವಯಂ ಆಗಿ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ತಿರುಪತಿ ವೆಂಕಟೇಶ್ವರ ಸನ್ನಿಧಿಗೆ ತೆರಳಿ ವಾಪಸಾದ ಬಳಿಕ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರಿಗಾಗಿ ಯಾವ ತ್ಯಾಗಕ್ಕೂ ಸಿದ್ದ, ಅಲ್ಲದೇ ಸಿಎಂ ವಿಷ ಕುಡಿಯಲು ಹೇಳಿದರು ಕೂಡ ಕುಡಿಯಲು ತಯಾರು ಎಂದು ಈ ಹಿಂದೆ ಕೃಷ್ಣಯ್ಯ ಶೆಟ್ಟಿ ತಮ್ಮ ಸ್ವಾಮಿನಿಷ್ಠೆಯ ಹೇಳಿಕೆಯನ್ನು ನೀಡಿದ್ದರು. ಅದಕ್ಕೆ ಪೂರಕ ಎಂಬಂತೆ ತಾವೇ ಸ್ವಯಂ ಆಗಿ ರಾಜೀನಾಮೆ ನೀಡುವುದಾಗಿ ಘೋಷಿಸುವ ಮೂಲಕ ತಮ್ಮ ಉದಾರ ಬುದ್ದಿಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಸಚಿವ ಗಿರಿಯ ಸಂದರ್ಭದಲ್ಲಿ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದ ಅವರು, ಮುಜರಾಯಿ ಇಲಾಖೆಗೆ ಒಳಪಟ್ಟ ಎಲ್ಲಾ ದೇವಸ್ಥಾನಗಳಲ್ಲೂ ಪ್ರತಿ ದಿನ ಸಿಎಂ ಯಡಿಯೂರಪ್ಪನವರ ಹೆಸರಲ್ಲಿ ಅರ್ಚನೆ ಮಾಡಬೇಕೆಂಬ ಸುತ್ತೋಲೆ ಹೊರಡಿಸಿ ಟೀಕೆಗೆ ಗುರಿಯಾಗಿದ್ದರು.
ಬೆಳಗಾವಿಯಲ್ಲಿ ಬುಧವಾರ ನಡೆಯುತ್ತಿರುವ ವಿಕಾಸ ಸಂಕಲ್ಪ ಯಾತ್ರೆ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ವಿ.ಸೋಮಣ್ಣ ಸಚಿವ ಸಂಪುಟ ಸೇರುವುದು ಖಚಿತ. ಸಚಿವ ಕೃಷ್ಣಯ್ಯ ಶೆಟ್ಟಿ ಅವರಿಗೆ ಬೇರೆ ಜವಾಬ್ದಾರಿ ನೀಡುವುದಾಗಿ ಶೆಟ್ಟಿ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡುತ್ತಾ ಸ್ಪಷ್ಟನೆ ನೀಡಿದರು.
ಗುರುವಾರ ಸಚಿವ ಸಂಪುಟ ಪುನರ್ ರಚನೆಯಾಗಲಿದ್ದು, ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಪಾಳಯ ಸೇರಿದ್ದ ವಿ.ಸೋಮಣ್ಣ ಅವರಿಗೆ ಸಚಿವ ಪಟ್ಟ ಖಚಿತವಾಗಿದೆ. ಅಲ್ಲದೇ ಇನ್ನುಳಿದಂತೆ ಆಗಲಿರುವ ಬದಲಾವಣೆ ಕುರಿತು ಮುಖ್ಯಮಂತ್ರಿಗಳು ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ. |