ಸಚಿವ ಸಂಪುಟ ಪುನಾರಚನೆ ಮಾಡುತ್ತಿರುವ ಬೆನ್ನಲ್ಲೇ ನಿಗಮ, ಮಂಡಳಿಗಳಿಗೂ ಪುನಾರಚನೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿದ್ದಾರೆ.
ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿ ಅವರ ಸೂಚನೆ ಮೇರೆಗೆ ಈ ನಿರ್ಧಾರವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸರ್ಕಾರ ಕೆಲವು ನಿಗಮ, ಮಂಡಳಿಗಳ ನೇಮಕಾತಿಯನ್ನು ತರಾತುರಿಯಲ್ಲಿ ಮಾಡಿತ್ತು. ಈ ನೇಮಕಾತಿ ಪಕ್ಷದೊಳಗೆ ವಿವಾದ ಸೃಷ್ಟಿಸಿತ್ತು. ಹತ್ತಕ್ಕೂ ಹೆಚ್ಚು ನೀರಾವರಿ ಅಚ್ಚುಕಟ್ಟು ಪ್ರದೇಶಗಳು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕಾತಿ ನಡೆದಿತ್ತು.
ಅಧ್ಯಕ್ಷರು, ಸದಸ್ಯರ ನೇಮಕಾತಿ ಏಕಪಕ್ಷೀಯವಾಗಿ ನಡೆದಿತ್ತು. ಪಕ್ಷದವರನ್ನು ಬಿಟ್ಟು ಹೊರಗಿನವರಿಗೆ ಅವಕಾಶ ನೀಡಲಾಗಿದೆ ಎನ್ನುವ ಅತೃಪ್ತಿ ಪಕ್ಷದಲ್ಲಿ ಮೂಡಿತ್ತು. ಪುನಾರಚನೆ ಪ್ರಕ್ರಿಯೆಯಲ್ಲಿ ಅಧಿಕಾರದಲ್ಲಿ ಇದ್ದವರು ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ನಿಗಮ, ಮಂಡಳಿ ಪುನಾರಚನೆಯಲ್ಲಿ ಪಕ್ಷದ ಮಾಜಿ ಶಾಸಕರು, ಹಿರಿಯ ಕಾರ್ಯಕರ್ತರಿಗೆ ಅವಕಾಶ ನೀಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ಪಕ್ಷದ ನಿಷ್ಠಾವಂತರನ್ನು ಹೊರತುಪಡಿಸಿ, ಕೆಲವರಿಗೆ ಚುನಾವಣೆ ದೃಷ್ಟಿಯಲ್ಲಿ ಅವಕಾಶ ನೀಡಲಾಗಿತ್ತು. ಅಂತವರನ್ನು ಬದಲಾವಣೆ ಮಾಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ. |