ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಯಾವ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳದೆ ಎಲ್ಲಾ ಸ್ಥಾನಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಗೆ ಪಕ್ಷ ಸಜ್ಜುಗೊಂಡಿದ್ದು, ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲದೇ ಚುನಾವಣೆಯಲ್ಲಿ ಎಲ್ಲಾ ವಾರ್ಡ್‌ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಸಲಾಗುವುದು ಎಂದರು.
ಬಿಜೆಪಿ ಸರ್ಕಾರದ ಒಂದು ವರ್ಷದ ವಿಕಾಸ ಸಂಕಲ್ಪ ಯಾತ್ರೆ ಪಕ್ಷ ಸಂಘಟನೆಯ ಕಾರ್ಯಕ್ರಮಗಳಾಗಿವೆ ಎಂದು ಟೀಕಿಸಿದ ಅವರು, ಸರ್ಕಾರಿ ದುಡ್ಡಿನಲ್ಲಿ ಬಿಜೆಪಿ ಪಕ್ಷದ ಸಂಘಟನೆಯಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದ ಬಗ್ಗೆ ಜನರೇ ಬೇಸತ್ತು ಸರ್ಕಾರದ ವಿರುದ್ಧ ಹೋರಾಡಿ ಎಂದು ಹೇಳುವವರೆಗೂ ಮೌನವಾಗಿ ಇರುವ ನಿರ್ಧಾರವನ್ನು ಪಕ್ಷ ಮಾಡಿದ್ದು, ಸದಸ್ಯತ್ವ ನೋಂದಾವಣೆ ಸೇರಿದಂತೆ ಪಕ್ಷ ಸಂಘಟನೆಗೆ ಹೆಚ್ಚಿನ ಗಮನ ನೀಡುವುದಾಗಿ ಹೇಳಿದರು.
ಈ ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ಬೇಕಾಗಿಲ್ಲ, ಹಣ ಮಾಡಿದರೆ ಚುನಾವಣೆ ಗೆಲ್ಲಬಹುದು ಎನ್ನುವ ಭ್ರಮಾಲೋಕದಲ್ಲಿದೆ. ಇದು ಬಹಳ ದಿನ ನಡೆಯುವುದಿಲ್ಲ ಎಂದು ಭವಿಷ್ಯ ನುಡಿದರು. |