ಮುಜರಾಯಿ ಇಲಾಖೆ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದರು.
ತಿರುಪತಿಯಿಂದ ಬುಧವಾರ ಸಂಜೆ ನಗರಕ್ಕೆ ಮರಳಿದ ಕೃಷ್ಣಯ್ಯ ಶೆಟ್ಟಿಯವರು ಮುಖ್ಯಮಂತ್ರಿ ಗೃಹ ಕೃಷ್ಣಾದ ಒಳಹೋಗಲು ಅಭಿಮಾನಿಗಳು ಬಿಡದೆ ಸಾಕಷ್ಟು ಅಡ್ಡಿ ಉಂಟು ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಒಂದು ಹಂತದಲ್ಲಿ ಶೆಟ್ಟರ ಅಭಿಮಾನಿಯೊಬ್ಬ ಸಚಿವರ ಕಾರಿನ ಮುಂಭಾಗದ ಗಾಜಿಗೆ ತಲೆಜಜ್ಜಿಕೊಂಡರೆ, ಮತ್ತೊಬ್ಬ ಸಚಿವರ ಕಾಲು ಹಿಡಿದ ಪರಿಣಾಮ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಪೊಲೀಸರು ಮಧ್ಯಪ್ರವೇಶಿಸಿ ಸಚಿವ ಕೃಷ್ಣಯ್ಯ ಶೆಟ್ಟರನ್ನು ಅಭಿಮಾನಿಗಳ ಹಿಡಿತದಿಂದ ತಪ್ಪಿಸಲು ಹರಸಾಹಸ ಪಡಬೇಕಾಯಿತು. ಪಕ್ಷದ ಹಿತದೃಷ್ಟಿಯಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ತೀವ್ರ ಪ್ರತಿಭಟನೆ-ಬಸ್‌ಗೆ ಕಲ್ಲು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರನ್ನು ಸಚಿವ ಸಂಪುಟದಿಂದ ಕೈಬಿಡದಂತೆ ಒತ್ತಾಯಿಸಿ ಮಾಲೂರು ತಾಲೂಕು ಬಿಜೆಪಿ ಘಟಕ ಬುಧವಾರ ಮಾಲೂರು ಬಂದ್‌ಗೆ ಕರೆ ನೀಡಿದ್ದ ಪ್ರತಿಭಟನಾಕಾರರು ಬಸ್‌ಗೆ ಕಲ್ಲು ತೂರಾಟ ನಡೆಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಲೂರಿನ ಬಾಲಾಜಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೃಷ್ಣಯ್ಯ ಶೆಟ್ಟಿಯವರನ್ನು ಸಚಿವ ಸಂಪುಟದಿಂದ ಕೈಬಿಡದಂತೆ ಆಗ್ರಹಿಸಿದ್ದರು.
ಸಚಿವರಾಗಿ ಕೃಷ್ಣಯ್ಯ ಶೆಟ್ಟಿ ಅವರು ಸಾಕಷ್ಟು ಜನಪರ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶೆಟ್ಟಿ ಅವರ ರಾಜೀನಾಮೆ ಪಡೆಯುವ ನಿರ್ಧಾರವನ್ನು ಕೈಬಿಡಬೇಕೆಂದು ಪ್ರತಿಭಟನಾ ಕಾರ್ಯಕರ್ತರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಒಂದು ವೇಳೆ ಕೃಷ್ಣಯ್ಯ ಶೆಟ್ಟಿ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಅಂಗೀಕರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ರಸ್ತೆ ತಡೆಯಿಂದಾಗಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
|