ಕೈಗಾ ಅಣು ಸ್ಥಾವರ ಘಟಕದ ಎಲ್. ಮಹಾಲಿಂಗಂ ಅವರ ಸಾವಿನ ಪ್ರಕರಣದ ಬಗ್ಗೆ ಇದೀಗ ಕೆಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಡಿಎನ್‌ಎ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಮಹಾಲಿಂಗಂ ಅವರು ಕಚೇರಿಯ ಸಹೋದ್ಯೋಗಿಗಳ ಪ್ರಕಾರ ಶಾಂತ ಸ್ವಭಾವ ಮತ್ತು ಸ್ನೇಹ ಜೀವಿಯಾಗಿದ್ದು, ಯಾರ ಜೊತೆ ಹೆಚ್ಚು ಮಾತನಾಡದೆ ತಮ್ಮಷ್ಟಕ್ಕೆ ತಾವು ಇರುತ್ತಿದ್ದರು. ಯಾರ ಜೊತೆ ಕೂಡ ಜಗಳವಾಡುತ್ತಿರಲಿಲ್ಲ ಎಂಬುದಾಗಿ ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.
ಕೈಗಾ ಘಟಕದಲ್ಲಿ ವಿಜ್ಞಾನಿಯಾಗಿದ್ದ ಇವರು ಕೈಗಾ ಘಟಕದಲ್ಲಿ ತರಬೇತಿ ವಿಭಾಗದಲ್ಲಿದ್ದರು. ಆದರೆ ಇವರ ಸಾಂಸಾರಿಕ ಜೀವನ ಕುರಿತಂತೆ ಯಾರಿಗೂ ಹೆಚ್ಚಿನ ಮಾಹಿತಿ ಇಲ್ಲ. ಮಹಾಲಿಂಗಂ ನಾಪತ್ತೆಯಾಗುವ ಹಿಂದಿನ ದಿನ ತಮ್ಮ ಸಹೋದ್ಯೋಗಿಯೊಬ್ಬರ ಮನೆಯಲ್ಲಿ ಔತಣ ಕೂಟದಲ್ಲೂ ಪಾಲ್ಗೊಂಡಿದ್ದರು.
ಹಲವಾರು ಅನುಮಾನಗಳಿಗೆ ಕಾರಣವಾಗಿರುವ ಮಹಾಲಿಂಗಂ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಬೇರೆ ತಿರುವು ಪಡೆದುಕೊಳ್ಳುತ್ತಿದೆ. ಮಹಾಲಿಂಗಂ ಪತ್ನಿ ನೀಡಿದ ಹೇಳಿಕೆಯನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸುತ್ತಿದ್ದಾರೆ. ಹಾಗೆ ಮಹಾಲಿಂಗಂ ಅವರು ತಮಿಳುನಾಡಿನ ಕಲ್ಪಕಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಕೆಲ ಕಾಲ ನಾಪತ್ತೆಯಾಗಿದ್ದರು ಎಂದು ಹೇಳಲಾಗುತ್ತಿದೆ.
ಮಹಾಲಿಂಗ ಸಾವಿನ ಕುರಿತಂತೆ ಡಿಎನ್ಎ ವರದಿ ಬಂದ ನಂತರ ತನಿಖೆ ಚುರುಕುಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಡಿಎನ್ಎ ವರದಿ ಬಂದ ನಂತರ ಪತ್ತೆಯಾದ ದೇಹ ಮಹಾಲಿಂಗಂ ಅವರದಲ್ಲ ಎಂದರೆ ತನಿಖೆಯನ್ನು ಹೊಸದಾಗಿ ಆರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. |