ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಮತ್ತು ಸಿಡಿಲಿಗೆ ಏಳು ಮಂದಿ ಬಲಿಯಾಗಿದ್ದಾರೆ. ಗುಲ್ಬರ್ಗ ತಾಲೂಕಿನ ಭೂಪಾಲತೆಗನೂರದಲ್ಲಿ ಸಿಡಿಲಿಗೆ ಐದು ಮಂದಿ, ಬಾಗಲಕೋಟೆಯಲ್ಲಿ ಮನೆಕುಸಿತಕ್ಕೆ ಓರ್ವ ಸಾವನ್ನಪ್ಪಿದ್ದು, ವಿಜಾಪುರದಲ್ಲಿ ಬಾಲಕನೊಬ್ಬ ಹಳ್ಳದಾಟುವಾಗ ನೀರುಪಾಲಾಗಿದ್ದಾನೆ.
ಗುಲ್ಬರ್ಗ ತಾಲೂಕಿನ ಭೂಪಾಲತೆಗನೂರ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ ಜಟ್ಟೆಪ್ಪ(25) ಹಾಗೂ ಅನಿಲ್ ಕುಪೇಂದ್ರ(19) ಎಂಬವರು ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟರು. ಅಫಜಲಪುರದ ಚಿಂಚೋಳಿ ಗ್ರಾಮದಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡು ಮರಳುತ್ತಿದ್ದ ವೇಳೆ ಮಾತಾಳ ಗ್ರಾಮದ ಕಾಶಿನಾಥ ಭೀಮತಾ ಭಜಂತ್ರಿ(55) ಹಾಗೂ ಗುಲ್ಬರ್ಗ ಸಂತ್ರಸವಾಡಿಯ ರಾಣಪ್ಪ ಭೀಮಶಾಚೌಧ(56) ಸಿಡಿಲಿಗೆ ಬಲಿಯಾಗಿದ್ದಾರೆ.
ಸೇಡಂ ತಾಲೂಕಿನ ಮುಧೋಳದಲ್ಲಿ ನರಸಪ್ಪ ಸುಕ್ಕಪ್ಪ (60) ಹೊಲದಲ್ಲಿ ಬೀಜ ಬಿತ್ತುವಾಗ ಅವರಿಗೆ ಸಿಡಿಲು ಬಡಿದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಬಾಗಲಕೋಟೆಯ ನಗರದಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಗದ್ದನಕೇರಿಯಲ್ಲಿ ಮನೆಯೊಂದು ಕುಸಿದು ಬಿದ್ದ ಪರಿಣಾಮ ಗುರುಸಿದ್ದವ್ವ ಬಾದರದಿನ್ನಿ(62)ಮೃತಪಟ್ಟಿದ್ದಾರೆ. ಅಲ್ಲದೇ ಬಸವನ ಬಾಗೇವಾಡೆ ಬಳಿಯ ಬ್ಯಾಕೋಡ-ಜಾವವಾಡಗಿ ಮಧ್ಯದಲ್ಲಿರುವ ಹಳ್ಳವನ್ನು ದಾಟುವಾಗ ಬಾಲಕ ನೀರು ಪಾಲಾಗಿದ್ದು, ಬುಧವಾರ ಮಹಾಂತೇಶ ಮಡಿವಾಳಪ್ಪ ಹೆಬ್ಬಾಳ(15) ಎಂಬಾತನ ಶವ ಸಿಕ್ಕಿದೆ. |