ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ ಆಡಳಿತಾರೂಢ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣವನ್ನೇ ಮಾಡುತ್ತಿದೆ ಎಂದು ದೂರಿರುವ ಎಚ್.ಡಿ.ರೇವಣ್ಣ ಸರ್ಕಾರ ಹಾಸನದ ಮೆಡಿಕಲ್ ಕಾಲೇಜಿಗೆ ಪ್ರವೇಶಾತಿ ನಿರ್ಬಂಧಿಸಿದೆ. ಆದರೆ ಪ್ರವೇಶಾತಿಗೆ ಅನುಮತಿ ದೊರಕಿಸಿಕೊಡುವ ಶಕ್ತಿ ಇನ್ನೂ ಮಾಜಿ ಪ್ರಧಾನಿ ದೇವೇಗೌಡರಿಗೆ ಇದೆ ಎಂದು ಗುಡುಗಿದ್ದಾರೆ.
ನಗರದ ಮೆಡಿಕಲ್ ಕಾಲೇಜಿಗೆ ಮಂಗಳವಾರ ಭೇಟಿ ನೀಡಿದ್ದ ವೈದ್ಯಕೀಯ ಸಚಿವ ರಾಮಚಂದ್ರೇಗೌಡರು ಹಾಸನ ಮತ್ತು ಮಂಡ್ಯ ಮೆಡಿಕಲ್ ಕಾಲೇಜುಗಳಿಗೆ ಈ ಬಾರಿ ಪ್ರವೇಶಾತಿ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದರು. ಈ ಕುರಿತಂತೆ ರೇವಣ್ಣ ಅವರು ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಮೆಡಿಕಲ್ ಕಾಲೇಜು ಆರಂಭಿಸಲು ಹಾಗೂ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಇಂಡಿಯನ್ ಮೆಡಿಕಲ್ ಕೌನ್ಸಿಲ್ ನಿಗದಿಪಡಿಸಿರುವ ಎಲ್ಲಾ ಸೌಲಭ್ಯಗಳು ಇವೆ. ಆದರೂ ಏಕೆ ಈ ಬಾರಿ ಪ್ರವೇಶಾತಿ ರದ್ದುಗೊಳಿಸಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ದೂರಿದರು. ಜೂನ್ 18ರಂದು ಮಾಜಿ ಪ್ರಧಾನಿ ದೇವೇಗೌಡರು ದೆಹಲಿಗೆ ತೆರಳುತ್ತಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದರು. |