ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ರಾಜೀನಾಮೆಯಿಂದ ಹಾದಿ ಸುಗಮಗೊಳ್ಳುವ ಮೂಲಕ ಗುರುವಾರ ವಿ.ಸೋಮಣ್ಣ ಅವರು ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು.
ಗುರುವಾರ ಬೆಳಿಗ್ಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸೋಮಣ್ಣ ಅವರಿಗೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಸೋಮಣ್ಣ ಅವರು ಸ್ವಾಮೀಜಿ ಹೆಸರಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಅನಂತ್ ಕುಮಾರ್ ಹಾಜರಿದ್ದರು.
ನೂನತವಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಸೋಮಣ್ಣ ಅವರಿಗೆ ವಸತಿ ಮತ್ತು ಮುಜರಾಯಿ ಸಚಿವಗಿರಿ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಮುಖ್ಯಮಂತ್ರಿಗಳು ತನಗೆ ಯಾವ ಜವಾಬ್ದಾರಿಯನ್ನು ವಹಿಸಿದರು ನಿರ್ವಹಿಸಲು ಸಿದ್ದ ಎಂದು ಪ್ರಮಾಣವಚನ ಸ್ವೀಕಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
2008ರ ಮೇ ತಿಂಗಳಿನಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರದ ಗದ್ದುಗೆಗೆ ಏರಿದ ಭಾಜಪ, ಒಂದು ವರ್ಷದ ಅವಧಿಯೊಳಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಸಂಪುಟವನ್ನು ಪುನಾರಚಿಸುತ್ತಿರುವುದು ಐದನೇ ಬಾರಿಯದ್ದಾಗಿದೆ.
ಮುಜರಾಯಿ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಕೃಷ್ಣಯ್ಯ ಶೆಟ್ಟಿ ಅವರು ಗುರುವಾರ ಸಂಜೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದಾಗಿ ಸೋಮಣ್ಣ ಅವರ ಹಾದಿ ಸುಗಮಗೊಂಡಿತ್ತು. ಇದಕ್ಕೂ ಮುನ್ನ ಹಿರಿಯ ಸಚಿವ ಬೆಳ್ಳುಬ್ಬಿಯ ತಲೆದಂಡದೊಂದಿಗೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಉಮೇಶ್ ಕತ್ತಿಗೆ ಸಚಿವ ಸ್ಥಾನ ಕಲ್ಪಿಸಿಕೊಡಲಾಗಿತ್ತು. ಒಟ್ಟಾರೆ ಈ ಎಲ್ಲ ಅಂಶ ಬಿಜೆಪಿಯೊಳಗೆ ಬೂದಿ ಮುಚ್ಚಿದ ಕೆಂಡದ ವಾತಾವರಣ ಸೃಷ್ಟಿಸತೊಡಗಿದೆ. |