ಕೇಂದ್ರದ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಇತ್ತೀಚೆಗಷ್ಟೇ ಸಂದರ್ಶಕರ ಅನುಕೂಲಕ್ಕಾಗಿ ತೆರೆದ ನೂತನ ಕಚೇರಿಯನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಡಿ.ಬಿ.ಚಂದ್ರೇಗೌಡ ಬೀಗ ಒಡೆದು ಕಚೇರಿಯನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ನಗರದ ಹೃದಯ ಭಾಗದಲ್ಲಿರುವ ಆಲಿ ಆಸ್ಗರ್ ರಸ್ತೆಯಲ್ಲಿರುವ ಸಂಸದರ ಕಛೇರಿಯನ್ನು ಎಸ್.ಎಂ.ಕೃಷ್ಣ ಅವರಿಗೆ ಮಂಜೂರು ಮಾಡಲಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಟಿ.ಸಾಂಗ್ಲಿಯಾನ ಪರಾಭವಗೊಂಡ ನಂತರ ಕೃಷ್ಣ ಅವರಿಗೆ ಬೆಂಗಳೂರು ಜಿಲ್ಲಾಧಿಕಾರಿ ಈ ಕಚೇರಿಯನ್ನು ಮಂಜೂರು ಮಾಡಿ ಇದಕ್ಕೆ ಸಂಬಂಧಪಟ್ಟ ಕಾಗದಪತ್ರವನ್ನು ಕೃಷ್ಣ ಅವರಿಗೆ ನೀಡಿದ್ದರು. ಕೃಷ್ಣ ಅವರ ಆಪ್ತ ಕಾರ್ಯದರ್ಶಿ ಪೊಲೀಸರಿಗೆ ಅಕ್ರಮ ಪ್ರವೇಶದ ಬಗ್ಗೆ ದೂರು ನೀಡಿದ್ದಾರೆ. ಸಂಸದ ಚಂದ್ರೇಗೌಡ ಅವರು ಇದ್ದಕ್ಕಿದ್ದಂತೆ ಕಚೇರಿ ಪ್ರವೇಶಿಸಿ ಬೀಗ ಒಡೆದು ಒಳಗೆ ಪ್ರವೇಶಿಸಿದ್ದಾರೆ. ಇದರಿಂದ ನಮಗೆ ಒಳಗೆ ಪ್ರವೇಶಿಸಲು ಆಗುತ್ತಿಲ್ಲ. ಕೃಷ್ಣ ಅವರಿಗೆ ಸಂಬಂಧಪಟ್ಟ ಹಲವಾರು ದಾಖಲೆ ಪತ್ರಗಳು ಕಚೇರಿಯಲ್ಲಿ ಇರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.ಕೃಷ್ಣ ಈಗ ಸಚಿವರಾಗಿರುವುದರಿಂದ ಅವರಿಗೆ ಕಚೇರಿ ಅನಗತ್ಯ. ಈ ಕಚೇರಿಯನ್ನು ಮುಖ್ಯಮಂತ್ರಿಯವರಿಂದ ತಾವು ಮಂಜೂರು ಮಾಡಿಕೊಳ್ಳುವುದಾಗಿ ಚಂದ್ರೇಗೌಡ ಸಮರ್ಥನೆ ನೀಡಿದ್ದಾರೆ. ಈ ಬೆಳವಣಿಗೆ ರಾಜ್ಯರಾಜಕಾರಣದಲ್ಲಿ ಯಾವ ರೀತಿ ವಿವಾದ ಹುಟ್ಟು ಹಾಕುತ್ತೋ ಎಂಬುದನ್ನು ಕಾದುನೋಡಬೇಕಾಗಿದೆ. |