ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಸಚಿವರು ತೃಪ್ತಿಕರವಾಗುವಂತೆ ಕೆಲಸ ಮಾಡುತ್ತಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಸರ್ಕಾರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯ ಕಾಣುತ್ತಿಲ್ಲ. ಒಂದು ತಿಂಗಳಿನಲ್ಲಿ ಸಚಿವರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಯಂತ್ರದ ಮೇಲೆ ಹಿಡಿತ ಸಾಧಿಸುವಲ್ಲಿ ಬಿಜೆಪಿ ಸರ್ಕಾರ ಹಿಂದೆ ಬಿದ್ದಿದೆ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮರುಕಳಿಸಲು ಅವಕಾಶ ನೀಡುವುದಿಲ್ಲ. ಈ ಹಿಂದೆ ನಡೆದಿರುವ ತಪ್ಪಿನಿಂದಾಗಿ ಎಚ್ಚೆತ್ತುಕೊಂಡಿದ್ದೇವೆ. ಇನ್ನು ಮುಂದಾದರೂ ಸಚಿವರು ಎಚ್ಚೆತ್ತುಕೊಂಡು ಹಿಂದೆ ಮಾಡಿದ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಜನರನ್ನು ತಲುಪಬೇಕಾಗಿದೆ ಎಂದು ಸಲಹೆ ನೀಡಿದರು.
ವಾರದಲ್ಲಿ ಒಂದು ದಿನವಾದರೂ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಜನರ ಸಂಕಷ್ಟಗಳನ್ನು ದೂರ ಮಾಡುವಂತೆ ಸಚಿವರಿಗೆ ಸೂಚಿಸಿದ್ದಾರೆ. ಈಗಾಗಲೇ ಕೆಲ ಸಚಿವರ ಕಾರ್ಯ ವೈಖರಿ ಸರಿಯಿಲ್ಲ ಎಂದು ಪಕ್ಷದ ರಾಷ್ಟ್ರ ನಾಯಕರ ಗಮನಕ್ಕೂ ತರಲಾಗಿದೆ. ಕಳೆದ ಒಂದು ವರ್ಷದಲ್ಲಿ ಸಚಿವರು ನಿರ್ವಹಿಸಿರುವ ಕಾರ್ಯ ವೈಖರಿ ಬಗ್ಗೆ ವರದಿಯನ್ನು ತಯಾರು ಮಾಡಲಾಗಿದೆ. ಈ ವರದಿಯನ್ನು ಸದ್ಯದಲ್ಲೇ ರಾಷ್ಟ್ರದ ನಾಯಕರಿಗೆ ಕಳುಹಿಸಲಾಗುತ್ತದೆ. ಅವರು ಪ್ರತಿಯೊಬ್ಬ ನಾಯಕನ ಕಾರ್ಯ ಚಟುವಟಿಕೆಯನ್ನು ಪರಿಶೀಲಿಸಲಿದ್ದಾರೆ. ಇದರಿಂದಾಗಿ ಇನ್ನು ಮುಂದಾದರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು ಎಂದರು. |