ರಾಜ್ಯದ ಬಯೋಟೆಕ್ ಪಾಲಿಸಿ ಪರಿಷ್ಕರಣೆ ಹಂತದಲ್ಲಿದ್ದು, ಈ ಕ್ಷೇತ್ರದ ವಿಕಾಸಕ್ಕೆ ಅಗತ್ಯವಿರುವ ಆರ್ಥಿಕ ಬೆಂಬಲ, ಮೂಲಭೂತ ಸೌಲಭ್ಯ ಇತರೆ ರಿಯಾಯಿತಿಗಳನ್ನು ಪರಿಷ್ಕರಣೆಯಲ್ಲಿ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು ಬಯೋಟೆಕ್ 2009 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೈವಿಕ ತಂತ್ರಜ್ಞಾನವನ್ನು ಪರಿಷ್ಕರಣೆ ಮಾಡಲಾಗುತ್ತಿದ್ದು, ಮತ್ತಷ್ಟು ಅಭಿವೃದ್ಧಿಗೆ ಸರ್ಕಾರ ಪೂರಕ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಜೈವಿಕ ತಂತ್ರಜ್ಞಾನ ಮಹತ್ವದ ಕ್ಷೇತ್ರವಾಗಿದ್ದು, ನಮ್ಮೆಲ್ಲರ ಬದುಕನ್ನು ಹಸನುಗೊಳಿಸುವ ಸಾಧ್ಯತೆ ಈ ಕ್ಷೇತ್ರಕ್ಕಿದೆ. ಕೃಷಿ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ ಅಳವಡಿಕೆಯಿಂದ ಉತ್ಪಾದನೆಯೂ ಅಧಿಕವಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಈ ತಂತ್ರಜ್ಞಾನ ಅಳವಡಿಕೆಯಿಂದ ಔಷಧಿಗಳ ಉಪಯುಕ್ತತೆಯೂ ಅಧಿಕವಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಈ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಕಾರ್ಯ ಪಡೆಗಳನ್ನು ರಚಿಸಲಾಗುತ್ತಿದೆ. ಡಾ. ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪ್ರಾರಂಭವಾಗಿರುವ ಜ್ಞಾನ ಆಯೋಗ ಕೂಡ ಹಲವಾರು ಮಾರ್ಗದರ್ಶನಗಳನ್ನು ಕೂಡ ನೀಡಿದೆ. ಅವಕಾಶಗಳು ಮತ್ತು ಸಂಪತ್ತನ್ನು ಸೃಷ್ಟಿಸುವ ಮೂಲಕ ಬಿಟಿ ಕ್ಷೇತ್ರ ಬೃಹತ್ ಕ್ರಾಂತಿಯನ್ನುಂಟುಮಾಡಿದೆ ಎಂದರು. |