ರಾಜ್ಯದ ಪ್ರಥಮ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದ್ದು, ಈ ಸಂಬಂಧದ ಮಸೂದೆಯನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಸಂಪುಟ ಸಭೆಯ ನಂತರ ಸಚಿವ ಸುರೇಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಪ್ರತಿಷ್ಠಿತ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ಖಾಸಗಿ ವಿ.ವಿ.ಮಸೂದೆಗೆ ಉಭಯ ಸದನಗಳಲ್ಲಿ ಒಪ್ಪಿಗೆ ಸಿಕ್ಕ ನಂತರ ಅದನ್ನು ಎಲ್ಲಿ ಸ್ಥಾಪಿಸಬೇಕು ಎನ್ನುವುದನ್ನು ಆ ಸಂಸ್ಥೆಯೇ ನಿರ್ಧರಿಸಲಿದೆ. ಶಿಕ್ಷಕರಿಗೆ ಮತ್ತು ಶಿಕ್ಷಣ ಕ್ಷೇತ್ರದ ಗುಣಮಟ್ಟ ಹೆಚ್ಚಿಸಲು ಮಾರ್ಗದರ್ಶನ ನೀಡುವ ಕೋರ್ಸ್‌ಗಳು, ಬೋಧಕೇತರ ಸಿಬ್ಬಂದಿಗೆ ತರಬೇತಿ ನೀಡುವಂತಹ ಕೋರ್ಸ್‌ಗಳನ್ನು ಈ ವಿಶ್ವವಿದ್ಯಾಲಯ ಸ್ಥಾಪಿಸಲಿದೆ ಎಂದರು.
ವಿ.ವಿ.ಸ್ಥಾಪನೆಗೂ ಮುನ್ನ 25ಕೋಟಿ ರೂಪಾಯಿ ದತ್ತಿನಿಧಿಯನ್ನು ಸರ್ಕಾರದಲ್ಲಿ ಇಡಬೇಕು. ವಿದ್ಯಾರ್ಥಿಗಳ ಪ್ರವೇಶಕ್ಕೆ ನಿಗದಿಪಡಿಸುವ ಶುಲ್ಕ ಮತ್ತು ನೇಮಕಾತಿ ವಿಚಾರದಲ್ಲಿ ಸರ್ಕಾರದ ಹಿಡಿತ ಇರುವುದಿಲ್ಲ ಎಂದು ಹೇಳಿದರು.
ಅಲ್ಲದೇ ಕಾರವಾರದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಅನುಮತಿ ನೀಡಿದ್ದು, ಈ ವರ್ಷದಿಂದಲೇ ಅದು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. |