ಹೈಕೋರ್ಟ್ ಆದೇಶ ತಮ್ಮ ವಿರುದ್ಧ ಇದ್ದರೂ ಕೂಡ ಒಂದನೇ ತರಗತಿಯಿಂದ ಮಾತೃಭಾಷೆ ಶಿಕ್ಷಣ ನೀಡುವ ನಿರ್ಧಾರಕ್ಕೆ ಬದ್ದ ಎಂದು ಹೇಳಿರುವ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ವಿರುದ್ಧ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಆರೋಪದ ಮೇಲೆ ಕ್ರಿಮಿನಲ್ ದೂರು ದಾಖಲಿಸಲಾಗಿದೆ.
ಬೆಂಗಳೂರು ಮಾಡರ್ನ್ ಇಂಗ್ಲಿಷ್ ಸ್ಕೂಲ್ ಅಧ್ಯಕ್ಷ ಎಂ.ಎಸ್.ಖಾನ್ ಸಲ್ಲಿಸಿರುವ ಈ ಅರ್ಜಿ ವಿಚಾರಣೆಗೆ ಯೋಗ್ಯವೇ ಎಂದು ಪರಿಗಣಿಸುವ ವಿಚಾರವನ್ನು ನಿರ್ಧರಿಸುವ ಸಲುವಾಗಿ ನ್ಯಾ.ಮಂಜುಳಾ ಚೆಲ್ಲೂರ್ ಮತ್ತು ನ್ಯಾ.ವೇಣುಗೋಪಾಲಗೌಡ ಅವರಿದ್ದ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿದೆ.
ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕೆಂಬ ಸರ್ಕಾರದ ಭಾಷಾ ಮಾಧ್ಯಮ ನೀತಿಯನ್ನು ಹೈಕೋರ್ಟ್ ಪೂರ್ಣಪೀಠ ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ, 2009-10ನೇ ಸಾಲಿನಿಂದ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಆದರೂ ಶಿಕ್ಷಣ ಸಚಿವ ಕಾಗೇರಿ, ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿರುವುದರಿಂದ ಒಂದನೇ ತರಗತಿಯಿಂದ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕೆಂಬ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳುವ ಮೂಲಕ ಕೋರ್ಟ್ ಆದೇಶಕ್ಕೆ ನಿಂದನೆ ಮಾಡಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದಾರೆ. |