ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡು ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದ್ದು, ಇದೀಗ ಎಲ್ಲವೂ ಶಮನವಾಗಿದೆ ಎನ್ನುತ್ತಿದ್ದರೂ ಕೂಡ ಗುರುವಾರ ಸೋಮಣ್ಣನ ಪ್ರಮಾಣವಚನ ಸಮಾರಂಭಕ್ಕೆ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಗೈರು ಹಾಜರಾಗುವ ಮೂಲಕ ಅಸಮಾಧಾನ ಬಹಿರಂಗಗೊಳಿಸಿದ್ದಾರೆ.ಗುರುವಾರ ರಾಜಭವನದಲ್ಲಿ ನಡೆದ ವಿ.ಸೋಮಣ್ಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಜನಾರ್ದನ ರೆಡ್ಡಿ, ಶ್ರೀರಾಮುಲು ಭಾಗವಹಿಸಿ ಅಚ್ಚರಿ ಮೂಡಿಸಿದರು. ಆದರೆ ವಿಧಾನಸಭಾಧ್ಯಕ್ಷ ಶೆಟ್ಟರ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಗೈರು ಹಾಜರಾಗಿ ತಮ್ಮ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರು.ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಹಾಗೂ ವಿಧಾನಪರಿಷತ್ತಿನ ಸಭಾಪತಿಗಳು ಪಾಲ್ಗೊಳ್ಳುವುದು ಸಂಪ್ರದಾಯ. ಆ ನಿಟ್ಟಿನಲ್ಲಿ ವಿಧಾನಪರಿಷತ್ ಸಭಾಪತಿ ವೀರಣ್ಣ ಮತ್ತೀಕಟ್ಟಿ ಪ್ರತಿಪಕ್ಷ ಕಾಂಗ್ರೆಸ್ಸಿನವರಾಗಿದ್ದರೂ ಗುರುವಾರದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದರೆ ಬಿಜೆಪಿಯವರೇ ಆಗಿರುವ ಸಭಾಧ್ಯಕ್ಷ ಶೆಟ್ಟರು ಕೈಕೊಡುವ ಮೂಲಕ ಅಸಮಾಧಾನ ತೋರ್ಪಡಿಸಿಕೊಂಡಿದ್ದಾರೆ.ಹಾಗೆಯೇ ಸೋಮಣ್ಣ ಅವರಿಗೆ ಅವಕಾಶ ಕಲ್ಪಿಸಲು ಸಚಿವ ಸ್ಥಾನವನ್ನು ಅನಿವಾರ್ಯವಾಗಿ ತ್ಯಾಗ ಮಾಡಿರುವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಕೂಡ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.ಪೂರಕ ಸುದ್ದಿ: ಶೋಭಾ ದೂರವಾಗುತ್ತಿದ್ದಾರೆಯೇ? |