ಬಳ್ಳಾರಿ ಗಣಿ ಧಣಿಗಳ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನಡುವೆ ತಲೆದೋರಿರುವ ಭಿನ್ನಮತ ದೂರ ಮಾಡಿ ಮನ ಓಲೈಸಲು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಮುಂದಾಗಿದ್ದಾರೆ.
ವಿವಾದಿತ ಓಬಳಾಪುರಂ ಗಣಿ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸುಗ್ಗಲಮ್ಮ ದೇವಸ್ಥಾನ ನೆಲಸಮ ಮಾಡಿದ ಪ್ರಕರಣ ಕುರಿತಂತೆ ಗಣಿಯ ಮ್ಯಾನೇಜರ್ ಮತ್ತು ಸಿಬ್ಬಂದಿ ಮೇಲೆ ಹೂಡಿದ್ದ ಮೊಕದ್ದಮೆಗಳನ್ನು ಹಿಂದೆ ಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ನಿರ್ಧಾರವನ್ನು ಬುಧವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಅಲ್ಲದೆ, ಬಳ್ಳಾರಿ ವಿಧಾನಸಭೆ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗಳ ಸಂದರ್ಭ ಬಳ್ಳಾರಿಯಲ್ಲಿ ಹೂಡಿದ್ದ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ 16 ಕೇಸುಗಳನ್ನು ಮುಕ್ತಾಯಗೊಳಿಸಲು ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸರ್ಕಾರದ ಈ ತೀರ್ಮಾನವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರ ವಿರೋಧ ವ್ಯಕ್ತ ಪಡಿಸಿ ನ್ಯಾಯಾಲಯದ ಮೆಟ್ಟಿಲೇರಿರುವ ಕೇಸುಗಳನ್ನು ವಾಪಸ್ ಪಡೆಯುವುದು ಸರಿಯಲ್ಲ ಎಂದು ತಿಳಿಸಿದ್ದರು ಕೂಡ, ಸರ್ಕಾರ ಅದನ್ನು ಗಣನೆಗೆ ತೆಗೆದುಕೊಳ್ಳದೆ ಈ ತೀರ್ಮಾನ ಕೈಗೊಂಡಿದೆ.
ಈ ಪ್ರಕರಣಗಳನ್ನು ಬಿಜೆಪಿ ಕಾರ್ಯಕರ್ತರು ಮತ್ತು ಗಣಿ ಸಹೋದರರ ಬೆಂಬಲಿಗರ ಮೇಲೆ ಹೂಡಲಾಗಿತ್ತು. ಇದೀಗ ದೂರುಗಳನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ರೆಡ್ಡಿ ಬ್ರದರ್ಸ್ ಗುರುವಾರ ನಡೆದ ವಿ.ಸೋಮಣ್ಣ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆಂದು ರಾಜಕೀಯ ಪಂಡಿತರ ಲೆಕ್ಕಚಾರವಾಗಿದೆ. |