ಗ್ರಾಮೀಣಾಭಿವೃದ್ಧಿ ಸಚಿವೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶೋಭಾ ಕರಂದ್ಲಾಜೆ ಅವರು ಸತತ ಮೂರನೇ ಬಾರಿಗೆ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಸಭೆಯ ವಿವರ ನೀಡುವುದರಿಂದ ತಪ್ಪಿಸಿಕೊಂಡಿದ್ದಾರೆ. ಗುರುವಾರದ ಸಂಪುಟ ಸಭೆಗೇ ಅವರು ಹಾಜರಾಗದೆ, ಅಸಮಾಧಾನ ಹೊರಗೆಡಹಿದ್ದಾರೆಯೇ ಎಂಬ ಕುರಿತೂ ಚರ್ಚೆ ನಡೆಯುತ್ತಿದೆ.ಸಂಪುಟ ಸಭೆಯ ಕುರಿತು ಶೋಭಾ ಕರಂದ್ಲಾಜೆ ಅವರೇಕೆ ವಿವರಣೆ ನೀಡಬೇಕು ಎಂಬ ಕುರಿತಾದ ಆಕ್ಷೇಪಾರ್ಹ ಧ್ವನಿಗಳಿದ್ದರೂ, ಇದುವರೆಗೆ ವಿವರಣೆ ನೀಡುತ್ತಿದ್ದ ಅವರು ಈಗ ದೂರವಾಗಿದ್ದೇಕೆ ಎಂಬ ಕುತೂಹಲದ ಪ್ರಶ್ನೆಗಳು ಎಲ್ಲೆಲ್ಲೂ ಕೇಳಿಬರುತ್ತಿದೆ.ಸಂಪುಟ ಸಭೆಯ ವಿವರಗಳನ್ನು ನೀಡುವುದು ಸಾಮಾನ್ಯವಾಗಿ ಮಾಹಿತಿ ಸಚಿವರ ಕಾರ್ಯ. ಆದರೆ, ಕಟ್ಟಾ ಸುಬ್ರಹ್ಮಣ್ಯಂ ನಾಯ್ಡು ಅವರು ಇದರಿಂದ ಹಿಂದೆ ಸರಿದಾಗ, ಮುಖ್ಯಮಂತ್ರಿಯವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾಗೆ ಈ ಹೊಣೆ ವಹಿಸಿದ್ದರು. ಶೋಭಾ ಮೊದಲ ಬಾರಿ ಶಾಸಕಿಯಾಗಿರುವುದರಿಂದ ಮತ್ತು ಆಕೆಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನೂ ನೀಡಲಾಗಿರುವುದರಿಂದ ಪಕ್ಷದೊಳಗಿಂದಲೇ ತೀವ್ರ ಅಪಸ್ವರವೂ ಕೇಳಿಬಂದಿತ್ತು.ಈ ಹಿನ್ನೆಲೆಯಲ್ಲಿ ಕಳೆದೆರಡು ಸಂಪುಟ ಸಭೆಗಳ ವಿವರಗಳನ್ನು ನೀಡಿದ್ದು ಹಿರಿಯ ಸಚಿವ ವಿ.ಎಸ್.ಆಚಾರ್ಯ.ಇತ್ತೀಚೆಗೆ ಬಿಜೆಪಿಯೊಳಗಿನ ಭಿನ್ನಮತ ಪರಾಕಾಷ್ಠೆಗೇರಿದೆ ಎಂಬ ಕಾರಣಕ್ಕೆ, ಕೇಂದ್ರೀಯ ನಾಯಕ ಅರುಣ್ ಜೇಟ್ಲಿಯವರು ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ಸಂದರ್ಭ, ಶೋಭಾಗೆ ಹೆಚ್ಚಿನ ಅಧಿಕಾರ ದೊರೆಯುತ್ತಿರುವ ವಿಷಯವೂ ಚರ್ಚೆಗೆ ಬಂದಿತೆಂದು ಮೂಲಗಳು ಹೇಳಿವೆ.ಸಂಪುಟ ಸಭೆ ವಿವರ ನೀಡುವುದರಿಂದ ಅವರನ್ನು ದೂರವಿಡಬೇಕು, ಯಾಕೆಂದರೆ ಆಕೆ ಮಾಹಿತಿ ಸಚಿವೆಯಲ್ಲ. ಇದರ ಬದಲು ಯಾರಾದರೂ ಹಿರಿಯ ಸಚಿವರಿಗೆ ಈ ಹೊಣೆ ವಹಿಸುವಂತೆ ಮುಖ್ಯಮಂತ್ರಿಗೆ ಜೇಟ್ಲಿ ತಾಕೀತು ಮಾಡಿದ್ದರು ಎಂದು ಮೂಲಗಳು ಹೇಳಿವೆ.ಆದರೆ, ಯಡಿಯೂರಪ್ಪ ಅವರು ಸಂಪುಟ ಪುನಾರಚನೆ ಸಂದರ್ಭ ಶೋಭಾ ಕರಂದ್ಲಾಜೆ ಅವರಿಗೆ ಮಾಹಿತಿ ಸಚಿವ ಪಟ್ಟ ನೀಡುವರೇ ಅಥವಾ ಅವರನ್ನು ದೂರವೇ ಇಡುವರೇ ಎಂಬ ಬಗ್ಗೆ ಪಕ್ಷದೊಳಗೆ ಕದನ ಕುತೂಹಲ ಹೆಚ್ಚಾಗುತ್ತಿದೆ.ಪೂರಕ ಓದು: ಇದೀಗ ಅಸಮಾಧಾನ ಸರದಿ: ಶೆಟ್ಟರ್, ಶೋಭಾ |