ನಗರದ ಟರ್ಫ್ ಕ್ಲಬ್ ಗುತ್ತಿಗೆಯನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದ್ದು, ಇದರಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಟರ್ಫ್ ಕ್ಲಬ್ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮೈಸೂರು ಟರ್ಫ್ ಕ್ಲಬ್‌ಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಈ ವಿಷಯ ತಿಳಿಸಿದ್ದಾರೆ.
ನಗರದ ಮಧ್ಯ ಭಾಗದಲ್ಲಿ ನಡೆಯುತ್ತಿರುವ ರೇಸ್ ಚಟುವಟಿಕೆಯನ್ನು ಸ್ಥಳಾಂತರಿಸುವ ಪ್ರಸ್ತಾವನ್ನು 20 ವರ್ಷದಿಂದಲೂ ಪದೇ ಪದೇ ಕೇಳಿಬಂದಿತ್ತು. ಹಲವು ಬಾರಿ ಪ್ರಯತ್ನ ಆರಂಭವಾದರೂ ಅಂತಿಮ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ ಈ ಬಾರಿ ತಮ್ಮ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ರೇಸ್ ಚಟುವಟಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸರ್ಕಾರ ಉದ್ದೇಶಿಸಲಾಗಿಲ್ಲ. ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನೂತನ ಟರ್ಫ್ ಕ್ಲಬ್‌ಗೆ ಜಾಗ ನೀಡಲು ನಿರ್ಧರಿಸಲಾಗಿದೆ. ಅಲ್ಲಿ ಅಂತಾರಾಷ್ಟ್ರೀಯ ಗುಣ್ಣಮಟ್ಟದ ಕ್ಲಬ್ ನಿರ್ಮಿಸುವಂತೆ ಸಂಸ್ಥೆಯ ಆಡಳಿತ ಮಂಡಳಿಗೂ ಸೂಚನೆ ನೀಡಲಾಗಿದೆ ಎಂದರು.
ಮುಂದಿನ ವರ್ಷದ ಒಂದು ಅವಧಿಯ ರೇಸ್ ಚಟುವಟಿಕೆಯನ್ನು ಮೈಸೂರು ಟರ್ಫ್ ಕ್ಲಬ್ ಸ್ಥಳಾಂತರಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಈ ಕುರಿತು ಮೈಸೂರಿನ ಜಿಲ್ಲಾಧಿಕಾರಿ, ಟರ್ಫ್ ಕ್ಲಬ್ ಮುಖ್ಯಸ್ಥರು ಮತ್ತು ಪೊಲೀಸ್ ಇಲಾಖೆ ಮುಖ್ಯಸ್ಥರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ. |