ಆರೋಪ-ಪ್ರತ್ಯಾರೋಪಗಳ ನಡುವೆಯೇ ಇದೀಗ ಬೆಂಗಳೂರು ವಿಶ್ವವಿದ್ಯಾಲಯ ಪದವಿಯ ಸಪ್ಲಿಮೆಂಟರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲಾಗುವ ಮೂಲಕ ಬೆಂಗಳೂರು ವಿವಿ ಕರ್ಮಕಾಂಡ ಬಟಾಬಯಲಾಗಿದೆ.ನ್ಯೂಸ್ 9 ಹಾಗೂ ಟಿವಿ9 ತಂಡ ಶನಿವಾರ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಪ್ರಶ್ನೆ ಪತ್ರಿಕೆ ಮಾರಾಟ ಜಾಲ ಬಹಿರಂಗಗೊಂಡಿದೆ. ಇಂದು ಬೆಳಿಗ್ಗೆ ನಡೆಯಬೇಕಿದ್ದ 2ನೇ ವರ್ಷದ ಬಿ.ಕಾಂನ ಫೈನಾಶ್ಶಿಯಲ್ ಅಕೌಂಟಿಂಗ್ ಪ್ರಶ್ನೆ ಪತ್ರಿಕೆ ಜಯನಗರದ ಮೇವಾ ಕಾಲೇಜು ಆವರಣದಲ್ಲಿ ರಾಜಾರೋಷವಾಗಿ 3ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು.ಪರೀಕ್ಷೆಗೆ ಒಂದು ಗಂಟೆ ಇರುವ ಮುನ್ನ ಈ ಪ್ರಶ್ನೆ ಪತ್ರಿಕೆ ಮಾರಾಟ ಮಾಡಲಾಗುತ್ತಿತ್ತು, ಇಷ್ಟೆಲ್ಲಾ ಅವಾಂತರದ ನಂತರವೂ ಕೂಡ ಪರೀಕ್ಷೆ ಮಾತ್ರ ಮುಂದುವರಿದಿತ್ತು. ಮೇವಾ ಕಾಲೇಜು ಪ್ರಾಂಶುಪಾಲರಿಗೆ ವಿಷಯ ತಿಳಿಯುತ್ತಿದ್ದಂತೆಯೇ ಪ್ರಶ್ನೆ ಪತ್ರಿಕೆ ಮಾರಾಟ ಮಾಡುತ್ತಿದ್ದ ರಾಜ್ಯಶಾಸ್ತ್ರದ ಉಪನ್ಯಾಸಕ ಮಂಜುನಾಥ್ ಅವರನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ. ಲಿಂಬಾವಳಿ-ಸಿ.ಟಿ.ರವಿ ರಾಜೀನಾಮೆಗೆ ಡಿಕೆಶಿ ಆಗ್ರಹ: ಪ್ರಶ್ನೆ ಪತ್ರಿಕೆ ಮಾರಾಟ ಕುರಿತಂತೆ ಕಿಡಿ ಕಾರಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆಶಿ, ತಾವು ಸಾಜಾ ಎಂದೆಲ್ಲ ಬೊಬ್ಬಿರಿಯುತ್ತಿದ್ದ ಸಚಿವ ಅರವಿಂದ ಲಿಂಬಾವಳಿ ಮತ್ತು ಶಾಸಕ ಸಿ.ಟಿ.ರವಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.ಶಿಕ್ಷಣವನ್ನು ಮಾರಾಟಕ್ಕಿರುವ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು, ಹೀಗೆಲ್ಲ ಹಣಕೊಟ್ಟು ಪ್ರಶ್ನೆ ಪತ್ರಿಕೆ ಖರೀದಿಸಿ ಪರೀಕ್ಷೆ ನಡೆಸುವುದಾದರೆ ಪೋಷಕರು ಮಕ್ಕಳನ್ನು ಕಷ್ಟಪಟ್ಟು ಕಾಲೇಜಿಗೆ ಯಾಕೆ ಕಳುಹಿಸಬೇಕು ಎಂದು ಖಾರವಾಗಿ ಪ್ರಶ್ನಿಸಿರುವ ಡಿಕೆಶಿ, ಇದರ ಹಿಂದೆ ಎಬಿವಿಪಿ ಮಿತ್ರರಿದ್ದಾರೆ ಎಂಬುದು ಸ್ಪಷ್ಟ. ಆ ನಿಟ್ಟಿನಲ್ಲಿ ಲಿಂಬಾವಳಿ ಮತ್ತು ರವಿ ಮೊದಲು ರಾಜೀನಾಮೆ ನೀಡಲಿ. ತಾನು ಕೂಡ ತನ್ನ ರಾಜೀನಾಮೆ ಪತ್ರವನ್ನು ಅವರಿಗೆ ಕಳುಹಿಸುತ್ತೇನೆ ಎಂದರು.ಈ ಮೊದಲು ಬೆಂಗಳೂರು ವಿವಿ ಪ್ರಶ್ನೆ ಪತ್ರಿಕೆ ಬಯಲಾದ ಪ್ರಕರಣ ಕುರಿತು ಕಾಂಗ್ರೆಸ್ ಡಿ.ಕೆ.ಶಿವಕುಮಾರ್ ಅವರು ಪ್ರಶ್ನೆ ಪತ್ರಿಕೆ ಬಹಿರಂಗದ ಹಿಂದೆ ಭಯೋತ್ಪಾದನಾ ರಾಲಿ, ಎಬಿವಿಪಿ ಶಾಮೀಲಾತಿ ಕುರಿತಂತೆ ಗಂಭೀರವಾಗಿ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಸಿ.ಟಿ.ರವಿ ಅವರು, ಪ್ರಶ್ನೆ ಪತ್ರಿಕೆ ಬಹಿರಂಗಕ್ಕೂ ಭಯೋತ್ಪಾದನಾ ವಿರೋಧಿ ರಾಲಿಗೂ ಥಳಕು ಹಾಕುವ ಮೂಲಕ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಇಲ್ಲವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. ಈಗ ಶಿವಕುಮಾರ್ ನೀಡಿರುವ ಹೇಳಿಕೆ ಕಾಂಗ್ರೆಸ್ ಪಕ್ಷದ್ದೊ ಅಥವಾ ವೈಯಕ್ತಿಕ ಹೇಳಿಕೆಯೋ ಎಂಬುದನ್ನು ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಬೇಕು, ಕ್ಷಮೆಯಾಚಿಸದಿದ್ದಲ್ಲಿ ಅವಮಾನಕ್ಕೆ ಒಳಗಾಗಿರುವ ದೇಶಭಕ್ತ ವಿದ್ಯಾರ್ಥಿಗಳೇ ಮುಂದಿನ ನಡೆಯನ್ನು ತೀರ್ಮಾನಿಸಲಿದ್ದಾರೆ ಎಂದು ರವಿ ಕಿಡಿಕಾರಿದ್ದರು. |