'ಪೊಲೀಸರು ಸಮವಸ್ತ್ರ ಧರಿಸಿ ಸರ್ವಾಧಿಕಾರಿಗಳಂತೆ ವರ್ತಿಸಿ ಪ್ರಕರಣದ ಆರೋಪಿ ಮೇಲೆ ಹಲ್ಲೆ ನಡೆಸುವ ಮತ್ತು ಕಿರುಕುಳ ನೀಡುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದಾಗಿ ಲಾಕಪ್ ಡೆತ್ ಪ್ರಕರಣಗಳೂ ಹೆಚ್ಚುತ್ತಿವೆ' ಎಂದು ಸಿಓಡಿ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ನಗರದಲ್ಲಿ ಶುಕ್ರವಾರ ಪೊಲೀಸರು ಮತ್ತು ಮಾನವ ಹಕ್ಕುಗಳ ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು. ಇಂತಹ ಪ್ರವೃತ್ತಿಯನ್ನು ಬಿಟ್ಟು ಬುದ್ದಿವಂತಿಕೆಯಿಂದ ಸತ್ಯಾಂಶಗಳನ್ನು ಹೊರತೆಗೆಯಬೇಕು ಎಂದು ಅವರು ಸಲಹೆ ನೀಡಿದರು.
ಮಾನಸಿಕ-ದೈಹಿಕ ಹಿಂಸೆ ನೀಡುವ ಪೊಲೀಸರು ಕೆಟ್ಟವರಂತೆ ಕಾಣಿಸುತ್ತಾರೆ. ಆರೋಪಿಯನ್ನು ಎನ್‌ಕೌಂಟರ್ ಮಾಡುವುದಕ್ಕಿಂತ ಕೆಟ್ಟ ಕೆಲಸ ಇನ್ನೊಂದಿಲ್ಲ. ಆರೋಪಿಯನ್ನು ಬಂಧಿಸಿ ಮನಪರಿವರ್ತನೆ ಮಾಡುವ ಕೆಲಸ ಆಗಬೇಕಿದೆ ಎಂದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೊಲೀಸ್ ವಶದಲ್ಲಿ ಸಾಯುವವರ ಸಂಖ್ಯೆ ಕಡಿಮೆ ಇದೆ. ಆದರೆ ಈ ರೀತಿಯ ಘಟನೆಗಳು ನಡೆಯಬಾರದು. ಮಾನವ ಹಕ್ಕುಗಳು ತನಿಖೆಗೆ ಅಡ್ಡಿ ಆಗುತ್ತದೆ ಎಂದು ಪೊಲೀಸರು ಭಾವಿಸಬಾರದು. ಎಲ್ಲ ನಿಯಮಗಳನ್ನು ಪಾಲಿಸಿದರೆ ತನಿಖೆಗೆ ಸಹಕಾರ ಆಗಲಿದೆ ಎಂದು ಹೇಳಿದರು. |