ರೈಲ್ವೆ ಯೋಜನೆಗಳ ವಿಚಾರದಲ್ಲಿ ರಾಜ್ಯಕ್ಕೆ ಯಾವತ್ತೂ ಅನ್ಯಾಯ ಆಗಿಲ್ಲ ಎಂದು ಸ್ಪಷ್ಟಪಡಿಸಿರುವ ರೈಲ್ವೆ ರಾಜ್ಯ ಸಚಿವ ಮುನಿಯಪ್ಪ, ಕೆಲ ತಾಂತ್ರಿಕ ದೋಷದಿಂದಾಗಿ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ನಡೆದ ನೈರುತ್ಯ ರೈಲ್ವೆ ವಲಯದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಮುಖ ರೈಲ್ವೆ ಯೋಜನೆಗಳಿಗೆ ಕೆಲ ತಾಂತ್ರಿಕ ಕಾರಣಗಳು ಅಡ್ಡಿಯಾಗಿದೆ ವಿನಃ ಬೇರೇನು ಇಲ್ಲ. ಇಲಾಖೆಯ ಹುದ್ದೆಗಳ ನೇಮಕಕ್ಕೆ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ತಡವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಯೋಜಿಸಿರುವ ರೈಲ್ವೆ ಕಾಮಗಾರಿಗಳ ಕುರಿತು ಮಾತನಾಡಿದ ಸಚಿವರು, ಕರಾವಳಿ ತೀರದಿಂದ ಮಹಾರಾಷ್ಟ್ರದ ವರೆಗೆ ವಾಣಿಜ್ಯ ವಹಿವಾಟಿಗೆ ಅತ್ಯವಶ್ಯ ಎನಿಸಿರುವ ಹುಬ್ಬಳ್ಳಿ-ಅಂಕೋಲಾ ಮತ್ತು ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗಗಳಿಗೆ ಶೀಘ್ರವೇ ಚಾಲನೆ ನೀಡಲಾಗುವುದು. ಹಾಗೆಯೇ, ಬೆಂಗಳೂರು-ಹುಬ್ಬಳ್ಳಿ, ತೋರಣಗಲ್-ಕ್ಯಾಸಲ್‌ರಾಕ್ ಜೋಡಿ ಮಾರ್ಗಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳಿಯ ಭಾಷೆಯಲ್ಲಿ ಪರೀಕ್ಷೆ ನಡೆಸಬೇಕೆನ್ನುವ ಹಲವರಲ್ಲಿ ನಾನೂ ಒಬ್ಬ. ಆದರೆ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ನಮಗೆ ಏನೂ ಮಾಡಲು ಸಾಧ್ಯವಾಗದಂತಾಗಿದೆ. ಈ ನಿಟ್ಟಿನಲ್ಲಿ ಮುಂದೆ ಡಿ ದರ್ಜೆ ಹುದ್ದೆಗಳ ಭರ್ತಿ ವೇಳೆ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. |