ತ್ಯಾಜ್ಯ ವಿಲೇವಾರಿ ಘಟಕ ಇಲ್ಲದ ಆಸ್ಪತ್ರೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ, ಆ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿರುವ ರೋಗಿಗಳು ಭಯುಪಡಬೇಕಾದ ಅಗತ್ಯವಿಲ್ಲ ಎಂದು ಸಚಿವ ರಾಮಚಂದ್ರೇ ಗೌಡ ತಿಳಿಸಿದ್ದಾರೆ.
ಆಸ್ಪತ್ರೆಗಳಲ್ಲಿನ ತ್ಯಾಜ್ಯ ವಿಲೇವಾರಿ ಕುರಿತಂತೆ ಸೂಕ್ತ ಕ್ರಮಕೈಗೊಳ್ಳುವ ವ್ಯವಸ್ಥೆ ಮಾಡಲಾಗುವುದು, ಅಲ್ಲದೇ ಆಸ್ಪತ್ರೆಯನ್ನು ಮುಚ್ಚಬೇಕೆಂಬ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವನ್ನು ವಾಪಸು ಪಡೆಯುವಂತೆ ರಾಜ್ಯ ಸರ್ಕಾರ ಸೂಚನೆ ನೀಡಲಿದೆ ಎಂದು ಹೇಳಿದರು. ಈ ಕುರಿತು ಲೋಕ ಅದಾಲತ್‌ಗೂ ಸಮಜಾಯಿಷಿ ನೀಡಲಾಗುವುದು ಎಂದರು.
ತ್ಯಾಜ್ಯ ವಿಲೇವಾರಿ ಘಟಕವಿಲ್ಲದ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಾದ ವಿಕ್ಟೋರಿಯಾ, ಬೌರಿಂಗ್, ಕೆ.ಸಿ. ಜನರಲ್ ಆಸ್ಪತ್ರೆ ಸೇರಿದಂತೆ ಬೆಂಗಳೂರಿನ 9 ಆಸ್ಪತ್ರೆಗಳನ್ನು ಮುಚ್ಚಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿತ್ತು.
ನಿಗದಿತ ಗಡುವಿನಲ್ಲಿ ತ್ಯಾಜ್ಯ ವಸ್ತು ಸಂಸ್ಕರಣಾ ಘಟಕಗಳನ್ನು ನಿರ್ಮಿಸಿಕೊಳ್ಳುವಲ್ಲಿ ವಿಫಲವಾಗಿರುವ ನಗರದ ಒಂಬತ್ತು ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚಲು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ತೀರ್ಮಾನ ಕೈಗೊಂಡಿತ್ತು.
ಈ ಸಂಬಂಧ ಆದೇಶ ಹೊರಡಿಸಿದ್ದು, ಆಸ್ಪತ್ರೆಗಳನ್ನು ಮುಚ್ಚುವ ಪ್ರಕ್ರಿಯೆ ಪೂರ್ಣಗೊಳಿಸಲು 15 ದಿನಗಳ ಕಾಲಾವಕಾಶ ನೀಡಿರುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಹೈಕೋರ್ಟ್ ಲೋಕ ಅದಾಲತ್‌ಗೆ ತಿಳಿಸಿತ್ತು. |