ನಗರದ ಅಸ್ಗರ್ ಅಲಿ ರಸ್ತೆಯಲ್ಲಿರುವ ಸಂಸದರ ಕಚೇರಿ ಕಟ್ಟಡದ ಬೀಗ ಒಡೆದು, ಅತಿಕ್ರಮ ಪ್ರವೇಶ ಮಾಡಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಬೆಂಗಳೂರು ಉತ್ತರ ವಲಯ ಲೋಕಸಭಾ ಸದಸ್ಯ ಡಿ.ಬಿ.ಚಂದ್ರೇಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಬಗ್ಗೆ ಕೆಲ ಪತ್ರಿಕೆಗಳಲ್ಲಿ ಬಂದ ವರದಿಯಿಂದ ತೀರ ನೋವಾಗಿದೆ ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿಗೆ ಮಂಜೂರಾದ ಕಚೇರಿ ಕಟ್ಟಡವನ್ನು ಅನಧಿಕೃತವಾಗಿ ಆಕ್ರಮಿಸಿಕೊಳ್ಳುವ ತಪ್ಪು ಕೆಲಸ ಮಾಡುವುದಿರಲಿ, ಆ ಜಾಯಮಾನವೂ ನನ್ನದಲ್ಲಿ ಎಂದು ಹೇಳಿರುವ ಅವರು, ಸಾರ್ವಜನಿಕ ಜೀವನದಲ್ಲಿ ಶಿಸ್ತು, ಗೌರವ, ಸಭ್ಯತೆಗಾಗಿ ಹೋರಾಡುತ್ತ ಬಂದ ತಮ್ಮ ಬಳಿ ಎಂದೂ ಕೂಡ ವಾಮ ಮಾರ್ಗದ ಚಿಂತನೆಗಲು ಸುಳಿಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರಿಗೆ ಕಚೇರಿ ಕಟ್ಟಡ ಮಂಜೂರು ಮಾಡಿದ ಬೆಂಗಳೂರು ಜಿಲ್ಲಾಧಿಕಾರಿ ಪತ್ರ ಜೂನ್ 16ರಂದು ತಮ್ಮ ಕೈ ಸೇರಿದೆ ಎಂದು ಹೇಳಿರುವ ಚಂದ್ರೇಗೌಡರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಿಂದಿನ ಸಂಸದರಿಗೆ ಮಂಜೂರಾಗಿದ್ದ ಕಚೇರಿಯನ್ನು ನೋಡಿ ಬರಲು ಕಳೆದ 5-6 ದಿನಗಳ ಹಿಂದೆ ಹೋಗಿದ್ದು ನಿಜವೆಂದು ಹೇಳಿದ್ದಾರೆ. ನಡೆದ ವಿಚಾರ ಇಷ್ಟಾಗಿರುವಾಗ ಯಾವುದೇ ಕಟ್ಟಡದ ಅತಿಕ್ರಮ ಪ್ರವೇಶದ ಪ್ರಶ್ನೆಯೇ ಉದ್ಭವಿಸದು ಎಂದು ವಿವರಿಸಿದ್ದಾರೆ. |