ಬೆಂಗಳೂರು ವಿ.ವಿ. ಬಿ.ಕಾಂ ದ್ವಿತೀಯ ವರ್ಷದ ಸಪ್ಲಿಮೆಂಟರಿ ಪ್ರಶ್ನೆ ಪತ್ರಿಕೆ ಮಾರಾಟಕ್ಕೆ ಸಂಬಂಧಿಸಿ ಕುಲಪತಿ ಪ್ರಭುದೇವ್ ಮರು ಪರೀಕ್ಷೆ ನಡೆಸಲು ಆದೇಶ ನೀಡಿದ್ದಾರೆ. ಈ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕಸದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದರು.
ಈ ನಡುವೆಗೆ ಘಟನೆಗೆ ಕಾರಣವಾಗಿರುವ ಬೆಂಗಳೂರಿನ ಜಯನಗರದ ಮೇವಾ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದರು.
ಈ ಘಟನೆಯಿಂದ ಮೇವಾ ಕಾಲೇಜಿನಲ್ಲಿ ಮುಂಬರುವ ವಿ.ವಿ. ಪರೀಕ್ಷೆಗಳನ್ನು ನಡೆಸದಂತೆ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದರು.
ಘಟನೆ ವಿವರ: ಇಂದು ಬೆಂಗಳೂರು ವಿವಿ ದ್ವಿತೀಯ ವರ್ಷದ ಬಿ.ಕಾಂನ ಪ್ರಶ್ನೆ ಪತ್ರಿಕೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಾಸಗಿ ಚಾನೆಲ್‌ವೊಂದು ರಹಸ್ ಕಾರ್ಯಾಚರಣೆ ನಡೆಸುವ ಮೂಲಕ ಬಯಲಿಗೆ ತಂದಿತ್ತು. ಪರೀಕ್ಷೆ ಪ್ರಾರಂಭವಾಗುವುದಕ್ಕೂ ಒಂದು ಗಂಟೆ ಮೊದಲೇ ಪ್ರಶ್ನೆ ಪತ್ರಿಕೆ ಕೆಲವರ ಕೈ ಸೇರಿತ್ತು. ಇದು ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು ಹಾಗೂ ಈ ಸಂಬಂಧ ಉನ್ನತ ಶಿಕ್ಷಣ ಅರವಿಂದ ಲಿಂಬಾವಳಿ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ. |