ಇತ್ತೀಚಿನ ಸಂಪುಟ ಸಭೆಯಲ್ಲಿ ಗಣಿಧಣಿಗಳ ವಿರುದ್ಧವಿದ್ದ ಕೇಸುಗಳನ್ನು ವಾಪಾಸು ಪಡೆದಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಅಕ್ರಮ ಗಣಿಗಾರಿಕೆಗೆ ಮುಖ್ಯಮಂತ್ರಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.ಇವು ಯಾವುದೇ ಸರ್ಕಾರಿ ಅಥವಾ ಇತರ ಯಾವುದೇ ಪ್ರಕರಣಗಳಲ್ಲ, ಬದಲಿಗೆ ವೈಯಕ್ತಿಕ ಪ್ರಕರಣಗಳು. ಮುಖ್ಯಮಂತ್ರಿಯವರು ತಮ್ಮ ಕುರ್ಚಿ ಭದ್ರಪಡಿಸುವ ಸಲುವಾಗಿ ಗಣಿಧಣಿಳ ಒಲೈಕೆಗಾಗಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಸಿದ್ದು ಆರೋಪಿಸಿದರು.ಬಳ್ಳಾರಿಯ ಸಂಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಂಪುಟ ತೀರ್ಮಾನವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂಬುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿರುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ನುಡಿದರು. ಸಂಪುಟದ ನಿರ್ಧಾರಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು ಎಂಬುದಾಗಿ ಹೇಳಿದ ಮಾಜಿ ಉಪಮುಖ್ಯಮಂತ್ರಿಗಳು, ಶ್ರೀರಾಮುಲುಗೆ ಕಾನೂನಿನ ಅರಿವಿಲ್ಲ ಎಂದು ಲೇವಡಿ ಮಾಡಿದರು.ಬಿಜೆಪಿಯೊಳಗೆ ಭಿನ್ನಮತ ಇನ್ನೂ ಶಮನಗೊಂಡಿಲ್ಲ ಎಂದು ಅವರು ಈ ಸಂದರ್ಭದಲ್ಲಿ ದೂರಿದರು. ಗಣಿಧಣಿಗಳ ವಿರುದ್ಧದ ಮೊಕದ್ದಮೆಗಳನ್ನು ಹಿಂತೆಗೆದಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಿಸಿದರು. |