ಭಯೋತ್ಪಾದಕರು ಹಾಗೂ ಭಯೋತ್ಪಾದನೆ ವಿರುದ್ಧ ಕೆಂಡಕಾರುತ್ತಿದ್ದ ಆಡಳಿತಾರೂಢ ಬಿಜೆಪಿ ಸರ್ಕಾರವೇ ಇಂಟರ್‌ಪೋಲ್‌ನ ರೆಡ್‌ಕಾರ್ನರ್ ಪಟ್ಟಿಯಲ್ಲಿರುವ ಅಂತಾರಾಷ್ಟ್ರೀಯ ಭಯೋತ್ಪಾದಕನ ಜೊತೆ ಸೌರವಿದ್ಯುತ್ ಯೋಜನೆಗೆ ಪಾಲುದಾರಿಕೆಗೆ ಮುಂದಾದ ಅಚ್ಚರಿಯ ವಿಷಯವೊಂದು ಬಹಿರಂಗಗೊಂಡಿದೆ.
1992ರಲ್ಲಿ ಅಲ್ಜೀರಿಯಾದ ಹೌರಿ ಬೌಮೀಡೆನ್ ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಮುಖ ರೂವಾರಿಯಾಗಿರುವ ಸಲೀಂ ಅಬ್ಬಾಸ್ಸಿ ಎಂಬಾತನ ಪಾಲುದಾರಿಕೆಯಲ್ಲಿ ರಾಜ್ಯ ಸರ್ಕಾರ ಸುಮಾರು 300ಕೋಟಿ ರೂಪಾಯಿ ವೆಚ್ಚದ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿತ್ತು.!
ಆ ನಿಟ್ಟಿನಲ್ಲಿ ಅಬ್ಬಾಸ್ಸಿ ಜೂನ್ 18ರಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಅವರೊಂದಿಗೆ ಯೋಜನೆ ಬಗ್ಗೆ ಮಾತುಕತೆ ನಡೆಸಬೇಕಿತ್ತು. ಅದಕ್ಕಾಗಿ ಸಮಯವೂ ನಿಗದಿಯಾಗಿತ್ತು. ಈ ಮಾತುಕತೆಗಾಗಿ ಚೆನ್ನೈ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿಲು ಬುಧವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಪೊಲೀಸರ ಅತಿಥಿಯಾಗಿದ್ದ. ಬಂಧನದ ನಂತರ ವಿಚಾರಣೆಯಲ್ಲಿ ಈತ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂಬ ವಿಷಯ ಬಹಿರಂಗಗೊಂಡಿತ್ತು.
ಇತ್ತ ಕರ್ನಾಟಕದಲ್ಲಿ ಶಂಕರಮೂರ್ತಿ ಅಬ್ಬಾಸ್ಸಿಗಾಗಿ ಕಾಯುತ್ತಿದ್ದರು, ಆದರೆ ಚೆನ್ನೈ ಪೊಲೀಸರಿಂದ ಮಾಹಿತಿ ದೊರೆತ ನಂತರವೇ ವಿಷಯ ಕೇಳಿ ಬೆಚ್ಚಿಬಿದ್ದಿದ್ದರು. ಅತಿ ಕಡಿಮೆ ದರದಲ್ಲಿ ಅತಿ ಹೆಚ್ಚು ಸೌರಶಕ್ತಿ ಪಡೆಯುವ ರಾಜ್ಯ ಕರ್ನಾಟಕವಾಗಬೇಕು ಎನ್ನುವ ಆಸೆಯಿಂದ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿಶೇಷಾಧಿಕಾರಿ ಸತೀಶ್ ಕಶ್ಯಪ್ ಅವರು ಈ ಮಾತುಕತೆಗೆ ವೇದಿಕೆ ಮಾಡಿಕೊಟ್ಟಿದ್ದರು.
ಕಶ್ಯಪ್ ಅವರು ಇಂಟರ್‌ನೆಟ್ ಬ್ರೌಸ್ ಮಾಡುವಾಗ ಸಲೀಂ ಅಬ್ಬಾಸ್ಸಿ ಮಾಲೀಕತ್ವದ ಕತಾರ್ ಎನರ್ಗೋ ಸೋಲಾರ್ ಕಂಪೆನಿಯ ವಿವರ ಕಂಡು ಬಂದ ಹಿನ್ನೆಲೆಯಲ್ಲಿ ಮಾತುಕತೆಗೆ ಮುಂದಾಗಿದ್ದರು. ಸಾಮಾನ್ಯವಾಗಿ ವಿದೇಶಿಯರ ಜೊತೆ ಯಾವುದೇ ಯೋಜನೆ ಕುರಿತಾದ ಮಾತುಕತೆಗಳನ್ನು ಆಯಾ ದೂತವಾಸ ಕಚೇರಿಗಳ ಮೂಲಕವೇ ನಡೆಸಬೇಕು ಎಂಬುದು ನಿಯಮ. ಆದರೆ ರಾಜ್ಯ ಸರ್ಕಾರ ಮಾತ್ರ ಈ ವಿಷಯದಲ್ಲಿ ಯಾವುದೇ ಶಿಷ್ಟಾಚಾರ ಪಾಲಿಸಿಲ್ಲವಾಗಿತ್ತು. ಇದರಿಂದಾಗಿ ಭಾರೀ ಮುಖಭಂಗಕ್ಕೀಡಾಗುತ್ತಿದ್ದ ರಾಜ್ಯ ಸರ್ಕಾರ ಇದೀಗ ನಿಟ್ಟುಸಿರು ಬಿಟ್ಟಿದೆ. |