ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಬೂದಿಮುಚ್ಚಿದ ಕೆಂಡದಂತಿರುವ ನಡುವೆಯೇ, ಇತ್ತ ಕೆಪಿಸಿಸಿ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮೂಲ ನಿವಾಸಿ ಹಾಗೂ ವಲಸೆ ಬಂದ ನಾಯಕರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ನಡೆಯಿತು. ಘಟನೆ ವಿವರ: ಕೇಂದ್ರದ ನಾಲ್ವರು ಸಚಿವರನ್ನು ಸನ್ಮಾನಿಸುವ ಸಮಾರಂಭದಲ್ಲಿ ಡಿಕೆಶಿ ಮಾತನಾಡುತ್ತ, ಕುರುಬ ಹಾಗೂ ಹಿಂದುಳಿದ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಈಗ ಎಲ್ಲಾ ವರ್ಗಗಳ ನಾಯಕರನ್ನಾಗಿ ಮಾಡಿದೆ. ಕೇವಲ ಮೂರು ವರ್ಷಗಳ ಹಿಂದಷ್ಟೇ ಕಾಂಗ್ರೆಸ್‌ಗೆ ಸೇರಿದ್ದರೂ ಕೂಡ ಹೈಕಮಾಂಡ್ ಅವರನ್ನು ಪ್ರತಿಪಕ್ಷದ ಮುಖಂಡರನ್ನಾಗಿ ಮಾಡಿದೆ ಎಂದು ಹೇಳಿದ್ದರು.ಈ ಮಾತನ್ನು ಕೇಳಿದ ಸಿದ್ದರಾಮಯ್ಯನವರು ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಾ, ನನ್ನನ್ನು ಕೇವಲ ಒಂದು ಜಾತಿಯ ನಾಯಕನನ್ನಾಗಿ ಹಣೆಪಟ್ಟಿ ಕಟ್ಟುವ ಹುನ್ನಾರಗಳಿಗೆ ಬೆಲೆ ನೀಡುವುದು ಬೇಡು. ಕಾಂಗ್ರೆಸ್ ಪಕ್ಷ ಸೇರಿದ ಕ್ಷಣದಿಂದಲೇ ನಾನು ಕಾಂಗ್ರೆಸ್ಸಿಗನಾಗಿದ್ದೇನೆ. ನನ್ನ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ತಿರುಗೇಟು ನೀಡಿದರು.ಇನ್ನೊಂದೆಡೆ ಮೂಲ ಕಾಂಗ್ರೆಸಿಗ ಕೇಂದ್ರ ರೈಲ್ವೆ ರಾಜ್ಯ ಸಚಿವ ಕೆ.ಎಚ್ ಮುನಿಯಪ್ಪ ಅವರು ಮಾತನಾಡುತ್ತ, ಜನತಾದಳದಿಂದ ಕಾಂಗ್ರೆಸಿಗೆ ವಲಸೆ ಬಂದ ಕೆ.ಶ್ರೀನಿವಾಸ ಗೌಡರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರಲ್ಲದೆ, ಪಕ್ಷದಿಂದಲೇ ವಜಾಗೊಳಿಸುವಂತೆ ಆಗ್ರಹಿಸಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನೇ ಸೋಲಿಸಲು ಯತ್ನಿಸಿದವರು ಇನ್ನೂ ಪಕ್ಷದಲ್ಲಿ ಇರಲು ಯಾರು ಕಾರಣ?ಎಂದು ಪ್ರಶ್ನಿಸಿದ ಮುನಿಯಪ್ಪ, ಕೋಲಾರದಲ್ಲಿ ಜನರು ತನ್ನನ್ನು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.ಒಟ್ಟಾರೆ ಕೆಪಿಸಿಸಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ವೇದಿಕೆ ಮೂಲನಿವಾಸಿ ಮತ್ತು ವಲಸಿಗರ ನಡುವಿನ ಅಸಮಾಧಾನ ಹೊರಹಾಕುವ ವೇದಿಕೆ ಮಾಡಿಕೊಟ್ಟಂತಾಗಿತ್ತು. |