ಯುವ ಸಂಸದ ವರುಣ್ ಗಾಂಧಿ ಪ್ರಕರಣದಿಂದ ಬಿಜೆಪಿ ಪಾಠ ಕಲಿತು, ತನ್ನ ಧೋರಣೆಯನ್ನು ಬದಲಿಸಿಕೊಳ್ಳಬೇಕು ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಸಲಹೆ ನೀಡಿದ್ದಾರೆ.ವರುಣ್ ಗಾಂಧಿ ಅವರ ಅವಹೇಳನಕಾರಿ ಭಾಷಣವನ್ನು ಒಳಗೊಂಡ ಸಿಡಿಯನ್ನು ತಿರಚಲಾಗಿಲ್ಲ ಎಂದು ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯ ದೃಢೀಕರಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಂದು ವೇಳೆ ಈ ಪ್ರಕರಣದಿಂದ ಬಿಜೆಪಿ ಪಾಠ ಕಲಿತುಕೊಳ್ಳದಿದ್ದರೆ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯನ್ನು ತಿರುಚಲಾಗಿಲ್ಲ ಎಂದು ಕಾಂಗ್ರೆಸ್ ಈ ಮೊದಲೇ ಹೇಳಿತ್ತು. ಆದರೆ ಈಗ ಅದು ದೃಢಪಟ್ಟಿದೆ. ಕಾಂಗ್ರೆಸ್ ತಿರುಚುವ ಕುತಂತ್ರಕ್ಕೆ ಕೈ ಹಾಕುವುದಿಲ್ಲ ಅದೇನಿದ್ದರೂ ಬಿಜೆಪಿಯದ್ದು ಎಂದು ಅವರು ಕಿಡಿಕಾರಿದ್ದಾರೆ.ಅಲ್ಲದೆ, ಇದರ ಬಗ್ಗೆ ಜನತೆ ಈಗಾಗಲೇ ಅಂತಿಮ ತೀರ್ಮಾನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ. ರೆಕಾರ್ಡ್ ಮಾಡಲಾಗಿರುವ ಧ್ವನಿಯು ವರುಣ್ ಗಾಂಧಿಯವರದ್ದೇ ಎಂಬುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರುಗಿಸುವುದು ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. |