ಬಳ್ಳಾರಿಯ ಗಡಿವಿವಾದದ ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಕಾಂಗ್ರೆಸ್ ಮಾಜಿ ಸಚಿವ ದಿವಾಕರ್ ಬಾಬು ಅವರು ಪಕ್ಷದ ಹಿರಿಯ ನಾಯಕರ ಮಾತಿಗೆ ಮನ್ನಣೆ ನೀಡಿ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ.
ಹಿರಿಯ ಮುಖಂಡರ ಮಾತಿಗೆ ಗೌರವ ನೀಡಿ ಹಣ್ಣಿನ ರಸ ಕುಡಿಯುವ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ಮತ್ತು ಸಚಿವರಿಗೆ ಸರ್ಕಾರದ ಬದಲು ಅವರ ಸ್ವಾರ್ಥ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಇದೇ ಧೋರಣೆಯನ್ನು ಮುಂದುವರಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಸರ್ಕಾರದ ಇಂತಹ ಧೋರಣೆ ಸರಿಯಲ್ಲ. ರೈತರು ಕಾರ್ಮಿಕರ ವಿರುದ್ಧ ಹಾಕಿರುವ ಮೊಕದ್ದಮೆಗಳನ್ನು ಹಿಂದೆ ತೆಗೆದುಕೊಳ್ಳದ ರಾಜ್ಯ ಸರ್ಕಾರ, ಗಣಿ ಧಣಿಗಳು ರಾಜ್ಯದ ಗಡಿಯನ್ನೇ ಆಂಧ್ರ ಪ್ರದೇಶಕ್ಕೆ ಸೇರಿಸುವ ಕೃತ್ಯಕ್ಕೆ ಕೈ ಹಾಕಿರುವವರ ವಿರುದ್ಧ ಹೂಡಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದೆ ಪಡೆದಿದೆ ಎಂದು ದೂರಿದರು. ಆದರೆ ಇದನ್ನು ವಿರೋಧಿಸಿರುವವರ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವುದು ವಿಪರ್ಯಾಸ ಎಂದರು. |