ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ಪ್ರಯಾಣಕರು ಸಂಚಾರ ದಟ್ಟಣೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದರು. ಆದರೆ ಇದೀಗ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶೀಘ್ರವಾಗಿ ತಲುಪುವ ಹೈ ಸ್ಪೀಡ್ ರೈಲ್ ಲಿಂಕ್ (ಎಚ್‌ಎಸ್‌ಆರ್‌ಎಲ್) ಯೋಜನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೈ ಸ್ಪೀಡ್ ರೈಲ್ ಲಿಂಕ್ ಯೋಜನೆಯಲ್ಲಿ ಮುಂದುವರಿಯುವಂತೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, ಅದಕ್ಕಾಗಿ ಅಲ್ಪ ಪ್ರಮಾಣದ ಆರ್ಥಿಕ ನೆರವು ನೀಡುವುದಾಗಿ ಹೇಳಿದೆ. ಅಲ್ಲದೇ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಹೈ ಸ್ಪೀಡ್ ರೈಲ್ ಲಿಂಕ್ ಯೋಜನೆ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದು, ಅದನ್ನು ಮೇ ತಿಂಗಳಿನಲ್ಲಿ ಪುನರ್ ಪರಿಶೀಲಿಸಲಾಗಿತ್ತು. ಯೋಜನೆಗೆ ಕೇಂದ್ರ ಸಮ್ಮತಿ ಸೂಚಿಸಿತ್ತಲ್ಲದೇ, ವಯಬಿಲಿಟಿ ಗ್ಯಾಪ್ ಫಂಡಿಂಗ್ ಕುರಿತು ಗಮನ ಹರಿಸುವಂತೆ ತಿಳಿಸಿತ್ತು. ವಿಜಿಪಿ ನೆಲೆಯಲ್ಲಿ ಯೋಜನೆಗೆ ಸ್ಥಳ ಆಕ್ರಮಣದ ವೆಚ್ಚ ಸೇರುವುದಿಲ್ಲ ಎಂದು ಸೂಚಿಸಿತ್ತು.
ಆ ನಿಟ್ಟಿನಲ್ಲಿ ಹೈ ಸ್ಪೀಡ್ ರೈಲ್ ಲಿಂಕ್ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸ್ಟೇಟ್ ಇಂಡಸ್ಟ್ರೀಯಲ್ ಇನ್ವೆಸ್ಟ್‌ಮೆಂಟ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಬಿಡ್ ಕರೆದಿದ್ದು, 27ಮಂದಿ ಬಿಡ್ಡರ್ಸ್ ಭಾಗವಹಿಸಿದ್ದಾರೆ. ಆಗೋಸ್ಟ್ ತಿಂಗಳಲ್ಲಿ ಬಿಡ್ ಅನ್ನು ತೆರೆಯಲಾಗಿತ್ತು. ಇನ್ನು ಮುಂದಿನ ಹಂತವಾಗಿ ಟೆಕ್ನಿಕಲ್ ಬಿಡ್ ಕರೆಯಬೇಕಾಗಿದೆ.
ಎಂ.ಜಿ.ರೋಡ್‌ನಿಂದ ಆರಂಭವಾಗುವ 34ಕಿ.ಮೀ.ದೂರದ ಹೈ ಸ್ಪೀಡ್ ರೈಲ್ ಲಿಂಕ್ ಯೋಜನೆ ಸುಮಾರು 5,767ಕೋಟಿ ರೂ.ವೆಚ್ಚದ್ದಾಗಿದೆ. ಸುರಂಗ ಮಾರ್ಗದ ಈ ಬಹುಕೋಟಿ ಯೋಜನೆಯ ಹೈ ಸ್ಪೀಡ್ ರೈಲ್ ಲಿಂಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲಿದೆ.
ಈ ಮಹತ್ವದ ಯೋಜನೆಗಾಗಿ 162 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಯೋಜನೆ ನಿರ್ಮಾಣದಲ್ಲಿ ಮಾರ್ಕೆಟ್ ಸೇರಿದಂತೆ ಹಲವು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಇದಕ್ಕಾಗಿ ನೀಡುವ ಪರಿಹಾರ ವೆಚ್ಚ 532ಕೋಟಿ ರೂಪಾಯಿ ಆಗಲಿದೆ. ಎಚ್‌ಎಸ್‌ಆರ್‌ಎಲ್ ಬಿಆರ್‌ಬಿನಿಂದ ಆರಂಭವಾಗಲಿದೆ. ಹೆಬ್ಬಾಳ ಮತ್ತು ಯಲಹಂಕಾ ಎರಡು ಪ್ರಮುಖ ನಿಲುಗಡೆ ಇದೆ.
|